ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಆಯೋಜಿಸಲಾದ ಕಾರಂತ ಜನ್ಮದಿನೋತ್ಸವ- ಸಾಹಿತ್ಯೋತ್ಸವದಲ್ಲಿ ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಅವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಶಿವರಾಮ ಕಾರಂತರು ಬರೆದ ಚೋಮನ ದುಡಿ ಕನ್ನಡ ಮೊದಲ ದಲಿತ ಕಾದಂಬರಿ. ಅವರು ದಲಿತರ ಭೂಮಿಯ ಪ್ರಶ್ನೆ ಮೊತ್ತ ಮೊದಲ ಬಾರಿಗೆ ಈ ಕಾದಂಬರಿಯಲ್ಲಿ ಎತ್ತಿದರು. ದಲಿತರಿಗೆ ಭೂಮಿಯು ಧಾರ್ಮಿಕ ಮತ್ತು ರಾಜಕೀಯ ಕಾರಣದಿಂದ ಸಿಗುತ್ತಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾರಂತರದ್ದು ಹತ್ತು ಮುಖಗಳನ್ನು ಬಿಂಬಿಸುವ ವ್ಯಕ್ತಿತ್ವ. ಕಾರಂತರಂತಹ ನೇರ ನುಡಿಯ ವ್ಯಕ್ತಿಯನ್ನು ನಾನು ಈವರೆಗೆ ಕಂಡಿಲ್ಲ ಎಂದು ಹೇಳಿದರು. ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸ ಎಸ್.ಎ.ಕೃಷ್ಣಯ್ಯ, ಹಿರಿಯ ಸಂಶೋಧಕಿ ಡಾ.ರೇಖಾ ಬನ್ನಾಡಿ, ಯಕ್ಷಗಾನ ಕಲಾವಿದ ಶೇಕ್ ಮಹಮ್ಮದ್ ಗೌಸ್ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡ ಹಿರಿಯ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ್ ವಿಶೇಷ ಉಪನ್ಯಾಸ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಟ್ರಸ್ಟಿನ ಬುಲೆಟಿನ್ ಬಿಡುಗಡೆ ಮಾಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಡಾ.ನಾಗಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು.
ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯರಾದ ಜಿ.ಎಂ.ಶರೀಫ್ ಹೂಡೆ, ಸತೀಶ್ ಕೊಡವೂರು, ಭಾರತಿ ಮರವಂತೆ ವಿಶೇಷ ಪುರಸ್ಕೃತರ ಪರಿಚಯ ಮಾಡಿದರು. ಡಾ.ಎಂ.ಪ್ರಸಾದ್ ರಾವ್ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟ್ ಸದಸ್ಯರಾದ ಮಂಚಿ ರಮೇಶ್, ಡಾ.ಚೇತನ್ ಶೆಟ್ಟಿ ಕೋವಾಡಿ, ಸಂತೋಷ ನಾಯಕ್ ಪಟ್ಲ ಉಪಸ್ಥಿತರಿದ್ದರು. ಬಳಿಕ ಡಾ.ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿ ಆಧಾರಿತ ನಾಟಕ ಪ್ರದರ್ಶನಗೊಂಡಿತು.


















