ಉಡುಪಿ:ಸ್ವಯಂ ಚಾಲಿತ ಮ್ಯುಟೇಶನ್ ವ್ಯವಸ್ಥೆ ಜಾರಿ

ಉಡುಪಿ: ಭೂಮಿ ಮ್ಯುಟೇಷನ್‌ಗಳಿಗೆ ಸಂಬಂಧಿಸಿದಂತೆ ಆಕ್ಷೇಪ ರಹಿತ 7 ದಿನಗಳ (ನೋಂದಾಯಿತ) ಹಾಗೂ 15 ದಿನಗಳ (ನೋಂದಾಯಿತವಲ್ಲದ) ನೋಟೀಸು ಅವಧಿ ಹೊಂದಿರುವ ಮ್ಯುಟೇಶನ್‌ಗಳನ್ನು ನೋಟೀಸು ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಸೂಕ್ತ
ಮಾರ್ಪಾಡು ಮಾಡಲಾಗಿದ್ದು, ಈ ಸ್ವಯಂ ಚಾಲಿತ ಮ್ಯುಟೇಶನ್‌ಗೆ 2026 ರ ಫೆಬ್ರವರಿ 24 ರಂದು ಕಂದಾಯ ಸಚಿವರು ಚಾಲನೆ
ನೀಡಿರುತ್ತಾರೆ.

ಜಿಲ್ಲೆಯಲ್ಲಿ ಈ ಹಿಂದೆ ನೋಟೀಸು ರಹಿತ ಅಂದರೆ 9 ರೀತಿಯ (ಹಕ್ಕು & ಋಣ, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ಕೋರ್ಟ್ ಆದೇಶ, ಕೋರ್ಟ್ ತಡೆ/ತಡೆ ಬಿಡುಗಡೆ, ಸರ್ಕಾರಿ ಆದೇಶ, ಸಾಗುವಳಿದಾರರು ಮತ್ತು ಪಹಣಿ ವರ್ಗಾವಣೆ) ಮ್ಯುಟೇಶನ್‌ಗಳು ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುತ್ತಿದೆ.

ಜಿಲ್ಲೆಯಲ್ಲಿ ಈಗಾಗಲೇ 2025 ರ ಏಪ್ರಿಲ್ 1 ರಿಂದ ಒಟ್ಟು 58,676 ಅರ್ಜಿದಾರರ ಮ್ಯುಟೇಶನ್‌ಗಳು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಅನುಮೋದನೆಯಾಗಿರುತ್ತವೆ.ಇದರಿಂದಾಗಿ ಸಾರ್ವಜನಿಕರು ತಮ್ಮ ನೋಂದಾಯಿತ ದಸ್ತಾವೇಜುಗಳ (ಕ್ರಯ, ವಿಭಾಗ, ದಾನ) ಮ್ಯುಟೇಶನ್ ಪ್ರಕ್ರಿಯೆಗಾಗಿ ತಾಲ್ಲೂಕು ಕಛೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವಂತಾಗಿದ್ದು ಸಾರ್ವಜನಿಕರು ಸುಲಭ ಹಾಗೂ ಸುಲಲಿತವಾಗಿ ಅವರ ಜಮೀನಿನ ಮ್ಯುಟೇಶನ್‌ಗಳನ್ನು ಕ್ಲಪ್ತ ಸಮಯದಲ್ಲಿ ಪಡೆಯಬಹುದಾಗಿರುತ್ತದೆ ಹಾಗೂ ಜಮೀನಿನ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲು ಬಾಕಿ ಇರುವ ಸಾರ್ವಜನಿಕರು ಈ ಕೂಡಲೇ ಆಧಾರ್ ಜೋಡಣೆ ಮಾಡಿಸಿಕೊಂಡು ಅಕ್ರಮ ಖಾತಾ ಬದಲಾವಣೆಯನ್ನು ತಡೆಗಟ್ಟುವಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.