ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಎಲ್ಲಾ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರೋಡ್ ಶೋ ನಡೆಯುವ ಬನ್ನಂಜೆಯಿಂದ ಕಲ್ಸಂಕದವರೆಗೆ ಬ್ಯಾರಿಕೇಡ್ ಅಳವಡಿಸಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ದಾರಿಯುದ್ದಕ್ಕೂ ಎರಡು ಬದಿಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿತು. ಇಕ್ಕೆಲಗಳಲ್ಲಿ ಸಾಗುವ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಹಾಗೂ ಬ್ಯಾಗ್ ಗೋಣಿಚೀಲಗಳನ್ನು ಪರಿಶೀಲನೆ ನಡೆಸಲಾಯಿತು.
ಬೆಳಗ್ಗೆ 8:30ರ ಬಳಿಕ ಬನ್ನಂಜೆ ಮಾರ್ಗದಲ್ಲಿ ಖಾಸಗಿ ವಾಹನವನ್ನು ಸಂಪೂರ್ಣ ನಿರ್ಬಂಧಿಸಲಾಯಿತು.ಆ ಬಳಿಕ ಬನ್ನಂಜೆಯಲ್ಲಿ ನಿರ್ಮಿಸಲಾದ ವೇದಿಕೆ ಬಳಿ ನೀರಿನ ಕ್ಯಾನ್ ತರುವ ವಿಚಾರವಾಗಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪೊಲೀಸರಿಗೆ ಸಹಕಾರ ನೀಡುವಂತೆ ಕಾರ್ಯಕರ್ತರಿಗೆ ಸೂಚಿಸಿದರು. ತದನಂತರ ನೀರಿನ ಕ್ಯಾನ್ ಗಳು ಹಾಗೂ ಬಿಜೆಪಿ ಕಾರ್ಯಕರ್ತರನ್ನು ತಪಾಸಣೆಗೆ ಒಳಪಡಿಸಿದರು.
ರೋಡ್ ಶೋ ಮಾರ್ಗದಲ್ಲಿ ಪಾಂಡುರಂಗ ವಿಠಲ ವೇಷಧಾರಿ ಶಿವಾನಂದ ಪ್ರಭು ಹಾಗೂ ಸಂತ ತುಕಾರಾಮ ವೇಷಧಾರಿ ಎಂ.ಆರ್. ಪೈ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾದರು.





















