ಅನ್ ಲಾಕ್ ಆದರೂ ಒಂದು ವಾರ ಉಡುಪಿ‌ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶವಿಲ್ಲ

ಉಡುಪಿ: ಕೋವಿಡ್ ಪ್ರಕರಣಗಳು‌ ಇಳಿಕೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೋಮವಾರದಿಂದ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಮೂರನೇ ಹಂತದ ಅನ್ ಲಾಕ್ ಮಾರ್ಗಸೂಚಿಯಲ್ಲಿ ದೇವಸ್ಥಾನ, ಮಠ ಮಂದಿರಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ​ಹೀಗಾಗಿ ರಾಜ್ಯದ ಬಹುತೇಕ ದೇಗುಲಗಳು ನಾಳೆಯಿಂದ (ಜುಲೈ 5) ಭಕ್ತರಿಗೆ ಪ್ರವೇಶ ನೀಡಲು (ದೇವರ ದರ್ಶನ) ಸಿದ್ಧತೆ ಆರಂಭಿಸಿವೆ. ಆದರೆ, ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಮಾತ್ರ ಭಕ್ತರು ಇನ್ನೊಂದು ವಾರ ಕಾಯಲೇಬೇಕಾಗಿದೆ.

ಹೌದು, ನಾಳೆಯಿಂದ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಭಕ್ತರಿಗೆ ದರ್ಶನ ಆರಂಭಿಸದಿರಲು ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಸುತ್ತಮುತ್ತಲ ರಾಜ್ಯಗಳ ಚಿತ್ರಣ ನೋಡಿಕೊಂಡು, ಒಂದು ವಾರದ ಬಳಿಕ ಮಠದಲ್ಲಿ ಕೃಷ್ಣನ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪರ್ಯಾಯ ಅದಮಾರು ಮಠಾಧೀಶರಾದ ಈಶ ಪ್ರೀಯ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.