ಉಡುಪಿ: ಅಂತರ್ ಜಿಲ್ಲಾ ಕಳ್ಳನ ಬಂಧನ; ₹4.33 ಲಕ್ಷ ನಗದು, ಎರಡು ಬೈಕ್ ವಶ

ಉಡುಪಿ: ನಗರದ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಉಡುಪಿ ನಗರ ಠಾಣಾ ಪೊಲೀಸರು ಓರ್ವ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ತಾಲೂಕಿನ ಸುರೇಶ್‌ ಪೂಜಾರಿ ಬಂಧಿತ ಆರೋಪಿ. ಈತನನ್ನು ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಒಟ್ಟು ₹4.33 ಲಕ್ಷ ನಗದು, ಎರಡು ಬೈಕ್, ಎರಡು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ:
ಇತ್ತೀಚೆಗೆ ಉಡುಪಿ ನಗರದ ಮಂಜುನಾಥ ಕಣ್ಣಿನ ಆಸ್ಪತ್ರೆಯ ಶೆಟರ್‌ನ ಬೀಗ ಮುರಿದು ಡ್ರಾವರ್‌ ಡ್ರಾವರ್‌ನಲ್ಲಿದ್ದ 4,79,000 ನಗದು ಮತ್ತು ಸಿಸಿ ಟಿವಿ ಡಿವಿಆರ್‌ನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಆಸ್ಪತ್ರೆಯ ಡಾ. ಶಕಿಲಾ ಸಚಿನ್ ಅವರು ದೂರು ನೀಡಿದ್ದರು.

ಪ್ರಕರಣ ಕೈಗೆತ್ತಿಕೊಂಡ ನಗರ ಠಾಣೆಯ ಪೋಲಿಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಸುರೇಶ್‌ ಪೂಜಾರಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಹಿಂದೆ ಶಿರ್ವ, ಹಿರಿಯಡಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ, ಬೆಳಗಾಂ, ಮೂಲ್ಕಿಗಳಲ್ಲಿ ಕಳ್ಳತನ ನಡೆಸಿದ್ದಾನೆ‌‌. ಈಚೆಗೆ ಉಡುಪಿಯ ಮಂಜುನಾಥ ಕಣ್ಣಿನ ಆಸ್ಪತ್ರೆ ಮತ್ತು ಮಲ್ಪೆ ಸೊಸೈಟಿಯಲ್ಲಿ ಕಳ್ಳತನ ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳ್ಳತನ ನಡೆಸಿರುವುದನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.

ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌ ಅವರ ಆದೇಶದಂತೆ, ಎಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್‌ಪಿ ಸುಧಾಕರ ಸದಾನಂದ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌, ಪ್ರಸಾದ್‌ಕುಮಾರ್‌, ಎಎಸ್‌ಐ ಜಯಕರ, ಅರುಣ್‌ ಸಿಬ್ಬಂದಿಯವರಾದ ಲೋಕೇಶ್‌, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್‌ ಅಹಮ್ಮದ್‌, ರಾಜೇಶ್‌, ದೇವರಾಜ್‌, ಕಿರಣ್, ಚೇತನ್‌, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್‌, ಕಾರ್ತಿಕ್‌, ಲಿಂಗರಾಜು, ರಾಕೇಶ್‌ ತನಿಖಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.