ಉಡುಪಿ: ಸಂಚಲನ ಸಂಸ್ಥೆಯ ವತಿಯಿಂದ ಜಿಲ್ಲಾಡಳಿತಕ್ಕೆ ಕೋವಿಡ್ ನಿರ್ವಹಣೆಗಾಗಿ ಉಚಿತ ಸೇವೆಯ ಆಂಬುಲೆನ್ಸ್ ಹಸ್ತಾಂತರ

ಉಡುಪಿ: ಸಂಚಲನ ಸ್ವಯಂ ಸೇವಾ ಸಂಘಟನೆ ಈಗಾಗಲೇ ಕಳೆದ 7 ವರ್ಷಗಳಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ವಿಶೇಷವಾಗಿ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳಗಳನ್ನು ಹಾಗೂ ಕೌಶಲ್ಯ ಅಭಿವೃದ್ದಿ ತರಬೇತಿಗಳನ್ನು ಆಯೋಜಿಸುತ್ತಿದೆ.

ಇದಲ್ಲದೇ ಪ್ರತಿ ವರ್ಷ ಕಾರ್ಗಿಲ್ ವಿಜಯ ದಿವಸದ ನೆನಪಿನಾರ್ಥ 527 ಗಿಡಗಳನ್ನು ಪ್ರಮುಖ ಸ್ಥಳಗಳಲ್ಲಿ ನೆಡುವುದು, ವಿಕಲಚೇತನರಿಗೆ ಸಹಾಯ ಮಾಡುವುದು, ರಕ್ತ ದಾನ ಶಿಬಿರವನ್ನು ಆಯೋಜಿಸುವುದು ಹೀಗೆ ಹತ್ತಾರು ಪ್ರಕಲ್ಪಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.

ಇದೀಗ ಕೋವಿಡ್ ಸಂಕಟದ ಸಮಯದಲ್ಲಿ ಉಡುಪಿ ಜಿಲ್ಲೆಯ ಬಡ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲು ಸಂಸ್ಥೆಯ ವತಿಯಿಂದ ಸುಸಜ್ಜಿತ ನೂತನ ಆಂಬುಲೆನ್ಸ್ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸಲು ನಮ್ಮ ಸಂಸ್ಥೆಯು
ಉಡುಪಿ ಜಿಲ್ಲಾಡಳಿತದೊಂದಿಗೆ
ಒಡಂಬಡಿಕೆಯ ಮೂಲಕ ಇಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯ್ತು.

ಈ ಸೇವೆಯನ್ನು ವಿಸ್ತರಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಯೋಜನೆಯೂ ನಮ್ಮ ಸಂಸ್ಥೆಗಿದೆ” ಎಂದು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಸಂಚಲನ ಸಂಸ್ಥೆಯ ಈ ಕೊಡುಗೆಗೆ ಜಿಲ್ಲಾಡಳಿತದ ಹಾಗೂ ಆರೋಗ್ಯ ಇಲಾಖೆಯ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿ ಇದೊಂದು ಶ್ಲಾಘನೀಯ ಕಾರ್ಯವೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪೌರ್ಣಮಿ ಪ್ರೇಮ್ ಶೆಟ್ಟಿ, ಸುಲೋಚನಾ ಶೆಟ್ಟಿ, ಓಂ ಪ್ರಸಾದ್ ಶೆಟ್ಟಿ, ವಿಜಯ್ ಡಿಸೋಜ, ಜೀವನ್ ಅಮಣ್ಣ ಉಪಸ್ಥಿತರಿದ್ದರು.