ನವದೆಹಲಿ: ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ(ಪಿಎಫ್) ಖಾತೆಯಲ್ಲಿನ ಶೇ.75ರಷ್ಟು ಹಣವನ್ನು ಉದ್ಯೋಗ ತೊರೆದ ತಕ್ಷಣವೇ ಹಿಂಪಡೆಯಬಹುದು ಹಾಗೂ ಉದ್ಯೋಗ ತೊರೆದು ಒಂದು ವರ್ಷದವರೆಗೂ ನಿರುದ್ಯೋಗಿಯಾಗಿ ಉಳಿದ ಬಳಿಕ ಸಂಪೂರ್ಣ ಮೊತ್ತವನ್ನು ಪಡೆಯಬಹುದು ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬುಧವಾರ ಸ್ಪಷ್ಟೀಕರಣ ನೀಡಿದೆ.
ಉದ್ಯೋಗ ತೊರೆದವರು ಪಿಎಫ್ ಮೊತ್ತ ಪಡೆಯಲು 1 ವರ್ಷ ಕಾಯಬೇಕು ಎಂಬ ಹೊಸ ನಿಯಮವನ್ನು ಮಂಗಳವಾರವಷ್ಟೇ ಇಪಿಎಫ್‌ಒ ಘೋಷಿಸಿತ್ತು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಇಪಿಎಫ್‌ಒ, ಸಂಪೂರ್ಣ ಮೊತ್ತ ಪಡೆಯಲು 1 ವರ್ಷ ಕಾಯಬೇಕಿದ್ದು, ಶೇ.75ರಷ್ಟು ಹಣವನ್ನು ತಕ್ಷಣ ಪಡೆಯಬಹುದು ಎಂದಿದೆ. ಇದಲ್ಲದೇ ಅಂತಿಮ ಪಿಂಚಣಿ ಪಡೆದುಕೊಳ್ಳಲು 36 ತಿಂಗಳುಗಳ ಕಾಲ ಕಾಯಬೇಕಿದೆ ಎಂದು ಇಪಿಎಫ್‌ಒ ಹೇಳಿದೆ.
ಭವಿಷ್ಯ ನಿಧಿ ಹಿಂಪಡೆಯುವ ನಿಯಮ ಬದಲಾವಣೆಯನ್ನು ಇಪಿಎಫ್‌ಒ ಮಂಗಳವಾರ ಘೋಷಿಸಿದ ಬಳಿಕ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಮೋದಿ ಸರ್ಕಾರವನ್ನು ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್, ದೇಶದ ಆರ್ಥಿಕತೆ ನಿರ್ವಹಿಸಲು ಸಾಧ್ಯವಾಗದ ಮೋದಿ ಸರ್ಕಾರ, ಉದ್ಯೋಗಿಗಳಿಗೆ ಶಿಕ್ಷೆ ನೀಡುತ್ತಿದೆ ಎಂದಿದೆ.


















