ಉಡುಪಿ:ಪೋಷಕರ – ಶಿಕ್ಷಕರ ಮಹಾಸಭೆ, ಮಕ್ಕಳ ದಿನಾಚರಣೆ ಕಾರ್ಯಕ್ರಮ

ಉಡುಪಿ: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇವರ ಜಂಟಿ ಆಶ್ರಯದಲ್ಲಿ ಪೋಷಕರ – ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಶುಕ್ರವಾರ ಮಣಿಪಾಲದ ರಾಜೀವನಗರ ಸರಕಾರಿ
ಸಂಯುಕ್ತ ಪ್ರೌಢಶಾಲೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಈ ಸಂದರ್ಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಎಲ್ಲಾ ಪೋಷಕರು ಶಾಲೆಯ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸುವುದರೊಂದಿಗೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ತಿಳಿಸಿದರು.

ಸರಕಾರದ ನಿರ್ದೇಶನದಂತೆ ದಾಖಲಾತಿ ಆಂದೋಲನ, ವಿದ್ಯಾರ್ಥಿಗಳ ಕಲಿಕೆ ಪ್ರಗತಿ, ಮಕ್ಕಳ ಸುರಕ್ಷತೆ ಮತ್ತು ಸರಕಾರದ ಪ್ರೋತ್ಸಾಹದಾಯಕ
ಯೋಜನೆಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧಾ ಚಟುವಟಿಕೆಗಳ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.

ಸಭೆಯಲ್ಲಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ಪ್ಲೋಸಿ ಫೆರ್ನಾಂಡಿಸ್, ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಮಿತ್ರ, ಮಾಜಿ
ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ, ಎಸ್.ಡಿ.ಎಂ.ಸಿ.ಗಳ ತಾಲೂಕು ಕಾರ್ಯದರ್ಶಿ ಮಮತಾ, ವಿದ್ಯಾರ್ಥಿಗಳು, ಪೋಷಕರು ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ, ಕನ್ನಡ ಶಿಕ್ಷಕ ಸಂಜೀವ ನಾಯಕ್ ನಿರೂಪಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿ ವಿನೋದ ವಂದಿಸಿದರು.