ಉಡುಪಿ: ಎಕೆಎಂಎಸ್ ಸೈಫುದ್ದೀನ್ ನನ್ನು ಹನಿಟ್ರ್ಯಾಪ್ ಮಾದರಿಯಲ್ಲಿ ಸಂಚುರೂಪಿಸಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರೋಪಿ ಫೈಜಲ್ ತನ್ನ ಪತ್ನಿ ರಿದಾ ಶಬಾನ, ಕಳೆದ ಒಂದು ವರ್ಷದಿಂದ ಸೈಫ್ ಜೊತೆ ಸಲುಗೆಯಿಂದ ಇದ್ದಳು. ಚಾಟಿಂಗ್, ಫೋನ್ ಕಾಲ್, ಫೋಟೋ ಶೇರ್ ಮಾಡುತ್ತಿದ್ದಳು. ತನ್ನ ಪತ್ನಿ ಸೈಫುದ್ದೀನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಫೈಜಲ್ ಗೂ ಮೊದಲೇ ತಿಳಿದಿತ್ತು. ಹೀಗಾಗಿ ಫೈಜಲ್ ತನ್ನ ಪತ್ನಿ ರಿದಾಳನ್ನು ಬಳಸಿಕೊಂಡು ಕೊಲೆಗೆ ಸಂಚುರೂಪಿಸಿದ್ದನು. ರಿದಾ ನಿನಗೆ ಕಾಯುತ್ತಿದ್ದಾಳೆ ಎಂದು ಹೇಳಿದ ಫೈಜಲ್ ತನ್ನ ಜೊತೆಯಲ್ಲಿ ಸೈಫ್ ನನ್ನು ಮಣಿಪಾಲದಿಂದ ಕೊಡವೂರಿನ ಮನೆಗೆ ಜೊತೆಗೆ ಕರೆದುಕೊಂಡು ಹೋಗಿದ್ದನು. ಪತ್ನಿಯ ಹೆಸರಲ್ಲಿ ಸುಳ್ಳು ಹೇಳಿ ಕರೆಸಿಕೊಂಡಿದ್ದನು.
ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಶರೀಫ್ ಮತ್ತು ಶುಕೂರ್ ಮೊದಲೇ ಕೊಡವೂರಿನ ಮನೆಯ ಶೆಡ್ ನಲ್ಲಿ ಅಡಗಿಕುಳಿತಿದ್ದರು. ಫೈಜಲ್ ಹಾಗೂ ಸೈಫ್ ಬರುತ್ತಿದ್ದಂತೆ ಅಲರ್ಟ್ ಆದ ಶರೀಫ್ ಹಾಗೂ ಶುಕೂರ್ ಹಿಂದಿನಿಂದ ಹೋಗಿ ತಲೆಗೆ ರಾಡ್ ನಿಂದ ಹೊಡೆದು, ಬೆನ್ನಿಗೆ ಚೂರಿಯಿಂದ ಇರಿದು ಬಳಿಕ ತಲವಾರಿನಿಂದ ಕಡಿದು ಹತ್ಯೆಗೈದಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಶರೀಫ್, ಫೈಜಲ್ ಹಾಗೂ ಶುಕೂರ್ ನನ್ನು ಬಂಧಿಸಿದ್ದು, ತನಿಖೆ ವೇಳೆ ರಿಧಾ ಸಂಚಿನಲ್ಲಿ ಭಾಗಿಯಾಗಿರುವುದು ಬಯಲಾಗಿದೆ. ಈ ನಿಟ್ಟಿನಲ್ಲಿ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ರಿದಾಳನ್ನು ಬಂಧನ ಮಾಡಲಾಗಿದೆ ಎಂದರು.
ಕೊಲೆಗೆ ಆರೋಪಿಗಳಿಗಿದ್ದ ವೈಯಕ್ತಿಕ ದ್ವೇಷ ಮಾತ್ರ ಕಾರಣವಲ್ಲ. ಹಣಕಾಸಿನ ನೆರವು ನೀಡಿರುವ ಅಂಶವು ತನಿಖೆಯಿಂದ ಬಯಲಾಗಿದೆ. ಆ ನಿಟ್ಟಿನಲ್ಲಿಯೂ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಪ್ರಕರಣದ ಹಿಂದೆ ಕೆಲವು ಮಂದಿ ಭಾಗಿಯಾಗಿರುವ ಸಾಧ್ಯತೆ ಆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಹೇಳಿದರು.


















