ಕುಂದಾಪುರ: ಇಂದಿನಿಂದ ರಾಜ್ಯಾದ್ಯಂತ 14 ದಿನ ಕೋವಿಡ್ ಲಾಕ್ ಡೌನ್ ಜಾರಿಯಾಗಿದ್ದು, ಸರ್ಕಾರವು ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದೆ.
ಲಾಕ್ ಡೌನ್ ನಿಂದ ಜನರು ನಾನಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಪೈಕಿ ಅಂಗಡಿಗೆ ಹೋಗಿ ಅಗತ್ಯ ವಸ್ತು ಖರೀದಿ ಮಾಡುವುದು ಕೂಡ ಜನರಿಗೆ ದೊಡ್ಡ ಸಮಸ್ಯೆ ಆಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಕುಂದಾಪುರ ತಾಲೂಕಿನ ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬುವವರು ವಿಡಂಬನಾತ್ಮಕವಾಗಿ ವೀಡಿಯೋ ಒಂದನ್ನು ತಯಾರಿಸಿದ್ದಾರೆ.
ಹೌದು, ಕಳೆದೆರಡು ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಪೊಲೀಸರ ಲಾಟಿ ಪ್ರಹಾರದ ದೃಶ್ಯಕಂಡು ವ್ಯಕ್ತಿಯೋರ್ವ ತಲೆಗೆ ಹೆಲ್ಮೆಟ್ ಧರಿಸಿ, ಬೆನ್ನಿಗೆ ತಗಡಿನ ಶೀಟ್ ಕಟ್ಟಿಕೊಂಡು ಪೇಟೆಗೆ ಅಗತ್ಯ ವಸ್ತು ಖರೀದಿಗೆ ತೆರಳುವ ವಿಡಿಯೋ ಒಂದನ್ನು ತಯಾರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಅಗತ್ಯ ವಸ್ತುಗಳ ಖರೀದಿಗೆ ಪೇಟೆಗೆ ನಡೆದುಕೊಂಡೇ ಹೋಗಬೇಕು. ಒಂದು ವೇಳೆ ವಾಹನ ತೆಗೆದುಕೊಂಡು ಹೋದರೆ ಪೊಲೀಸರ ಲಾಠಿ ಪ್ರಹಾರಕ್ಕೆ ತುತ್ತಾಗಬೇಕಾಗುತ್ತದೆ. ಹೀಗೆ ಜನರಿಗೆ ಲಾಕ್ ಡೌನ್ ನಿಂದ ಆಗಿರುವ ಆತಂಕ, ತೊಂದರೆಗಳನ್ನು ಕಟ್ಟಿಕೊಡುವ ಪ್ರಯತ್ನ ಇದಾಗಿದೆ.