ಉಡುಪಿ: ಜಿಲ್ಲೆಯಲ್ಲಿ ನರ್ಮ್ ಬಸ್ ಸಂಚಾರ ಆರಂಭಿಸುವಂತೆ ನಾಗರಿಕ ಸಮಿತಿ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿದ್ದು, ವಾಣಿಜ್ಯ ಚಟುವಟಿಕೆ, ಅಂಗಡಿ ಮುಂಗಟ್ಟು, ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಜನ ಜೀವನ ನಿಧಾನಗತಿಯಲ್ಲಿ ಸಹಜಸ್ಥಿತಿಗೆ ಬರುವ ಲಕ್ಷಣಗಳು ಕಂಡುಬಂದಿದೆ. ಆದರೆ ನಾಗರಿಕರು, ಕೂಲಿ ಕಾರ್ಮಿಕರು, ಉದ್ಯೋಗಿಗಳು ಸೂಕ್ತ ಸಂಚಾರ ಸೌಕರ್ಯ ಇಲ್ಲದೆ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿರುವುದು ಕಂಡುಬಂದಿದೆ.

ನಗರದಲ್ಲಿ ನರ್ಮ್ ಬಸ್, ಖಾಸಗಿ ಬಸ್ ಗಳ ಸಂಚಾರ ಆರಂಭಗೊಂಡಿಲ್ಲ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ನಗರದ ಹೊರ ವಲಯದ ಕಾರ್ಮಿಕರು, ಸಾರ್ವಜನಿಕರು ದುಡಿಮೆಗಾಗಿ ಕಿ.ಮೀ. ಗಟ್ಟಲೇ ನಡೆದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಉಡುಪಿ ನಗರದಲ್ಲಿ ಉದ್ಭವವಾಗಿದೆ.

ಲಾಕ್ ಡೌನ್ ಸಮಯದಲ್ಲಿ ದುಡಿಮೆ ಇಲ್ಲದೆ ಮನೆಯಲ್ಲಿ ದಿನಗಳ ಕಳೆಯುತ್ತಿದ್ದ ಶ್ರಮಿಕರು, ಅನ್ ಲಾಕ್ ಸಮಯದಲ್ಲಿ ದುಡಿಮೆಗೆ ಹೋಗಲು ಸಂಚಾರ ವ್ಯವಸ್ಥೆ ಇಲ್ಲದೆ ಕಾರ್ಮಿಕರ ಬದುಕು ಮತ್ತುಷ್ಟು ಬಿಗುಡಾಯಿಸಿದೆ. ಹಾಗಾಗಿ ಜಿಲ್ಲಾಡಳಿತ, ನಗರ ಸಾರಿಗೆ ಸಂಸ್ಥೆ, ಶಾಸಕರು ತಕ್ಷಣ ನರ್ಮ್ ಬಸ್ ಸಂಚಾರವನ್ನು ಆರಂಭಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.