ಕುಂದಾಪುರ: ಮನೆ, ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕತರ್ನಾಕ್ ಅಂತರ್ ಜಿಲ್ಲಾ ಕಳ್ಳ ದಂಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಂಪತಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತ: ಇಂದ್ರಾಳಿ ದುರ್ಗಾ ನಗರದ ಪ್ರಸ್ತುತ ಧಾರವಾಡ ಜಿಲ್ಲೆಯ ಜನತ್ ನಗರದ ರಾಜೇಶ ನಾಯ್ಕ ಯಾನೆ ರಾಜ ಯಾನೆ ರಾಜು ಪಾಮಡಿ (42) ಹಾಗೂ ಆತನ ಪತ್ನಿ ಪದ್ಮ ಪಾಮಡಿ (37) ಬಂಧಿತ ಆರೋಪಿಗಳು.
ಈ ದಂಪತಿಗಳು ಕುಂದಾಪುರ, ಉಡುಪಿ ನಗರ, ಮಣಿಪಾಲ, ಗಂಗೊಳ್ಳಿ, ಧಾರ ವಾಡ ನಗರ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿರುವ ಒಟ್ಟು 202 ಗ್ರಾಂ ತೂಕದ ಚಿನ್ನ ಹಾಗೂ ಒಟ್ಟು 1.683ಕೆ.ಜಿ. ಬೆಳ್ಳಿ, ಎರಡು ದ್ವಿಚಕ್ರ ವಾಹನ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಬೀಜಾಡಿ ಗ್ರಾಮದ ಬೀಪಾನ್ಬೆಟ್ಟು ಜಯ ರಾಜ್ ಶೆಟ್ಟಿ ಎಂಬವರ ಮನೆಗೆ ಬೀಗ ಮುರಿದು 9,88,500ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೆ ಈ ದಂಪತಿಗಳು ಕುಂದಾಪುರ, ಸುರತ್ಕಲ್, ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ ಕಾರಾವಾರದಲ್ಲಿ ಮನೆ, ದೇವಸ್ಥಾನ ಮತ್ತು ದೈವಸ್ಥಾನ ಗಳಲ್ಲಿ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.