ಕಾಪು ಬೀಚ್ ನಲ್ಲಿ ಇಬ್ಬರು ಯುವಕರು ನೀರುಪಾಲು: ಓರ್ವನ ಮೃತದೇಹ ಪತ್ತೆ

ಕಾಪು: ಕಾಪು ಬೀಚ್ ನಲ್ಲಿ ಈಜಲು ಇಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಂದು ಸಂಜೆ ಸಂಭವಿಸಿದೆ.

ಬೆಂಗಳೂರಿನ ಕಾರ್ತಿಕ್ ಮತ್ತು ರೂಪೇಶ್ ನೀರುಪಾಲಾದ ಯುವಕರು. ಇವರಲ್ಲಿ ರೂಪೇಶ್ ಎಂಬಾತನ ಮೃತದೇಹ ಪತ್ತೆಯಾಗಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ 5 ಮಂದಿ ಯುವಕರ ತಂಡ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದು, ಇದೇ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಸಮುದ್ರದ ನೀರಿನಲ್ಲಿ ಮುಳುಗಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಮೋದರ ಪುತ್ರನ್, ಚಂದ್ರಹಾಸ ಅವರು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆತನನ್ನು ದಡಕ್ಕೆ ತಂದು ಕೃತಕ ಆಮ್ಲಜನಕ ನೀಡಲಾಯಿತಾದರೂ ಅಷ್ಟರಲ್ಲೇ ರೂಪೇಶ್ ಪ್ರಾಣಪಕ್ಷಿ ಹಾರಿಹೋಗಿತ್ತು. ನೀರಿನಲ್ಲಿ ಮುಳುಗಿದ ಮತ್ತೊಬ್ಬ ಯುವಕ ಕಾರ್ತಿಕ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.