ಕುಂದಾಪುರ: ಅ.4 ರಂದು ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಶಂಕರ ನಾರಾಯಣದ ಭವ್ಯ ವೇದಿಕೆ ಮಕ್ಕಳ ಚಿತ್ತಾಕರ್ಷಕ ನೃತ್ಯ ಮತ್ತು ಭಕ್ತಿಭಾವದ ಅಭಿವ್ಯಕ್ತಿಯಿಂದ ಸಂಸ್ಕೃತಿಯ ಸಂಭ್ರಮದಿಂದ ತುಂಬಿತ್ತು. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳ ಪುಟ್ಟ ಹುಲಿ ಕುಣಿತ ಹಾಗೂ ಮುದ್ದು ಶಾರದೆ ಸ್ಪರ್ಧೆಗಳು ಮಕ್ಕಳ ಕಲೆ, ಶಿಸ್ತು ಮತ್ತು ಭಾವನಾತ್ಮಕತೆಯ ಅದ್ಭುತ ಪ್ರದರ್ಶನವಾಗಿದ್ದವು.

ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಹಾಗೂ ಕುಮಾರಿ ರೆನಿಟಾ ಲೋಬೋ ರವರು ತೀರ್ಪುಗಾರರ ಜೊತೆಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ನೃತ್ಯ ಗುರುಗಳಾದ ಜಗದೀಶ್ ಬನ್ನಂಜೆ, ಕಲಾವಿದರು ಮತ್ತು ಚಿತ್ರಕಲಾ ಶಿಕ್ಷಕರಾದ ರಾಘವೇಂದ್ರ ಚಾತ್ರಮಕ್ಕಿ, ಹಾಗೂ ಗಣಿತ ಉಪನ್ಯಾಸಕಿ ಮಾತ್ರವಲ್ಲದೆ ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆ ಶ್ರೀಮತಿ ಸಿಂಧೂರ ರಾವ್ ಉಪಸ್ಥಿತರಿದ್ದರು.

ಪ್ರಧಾನ ತೀರ್ಪುಗಾರರಾದ ರಾಘವೇಂದ್ರ ಚಾತ್ರಮಕ್ಕಿಯವರು ಮಾತನಾಡಿ “ಸಂಸ್ಕೃತಿಯ ಬುನಾದಿ ಬೆಳೆಸುವ ಕೆಲಸವನ್ನು ಮದರ್ ತೆರೆಸಾ ಶಿಕ್ಷಣ ಸಂಸ್ಥೆ ಅತ್ಯಂತ ಸುಂದರವಾಗಿ ನಿರ್ವಹಿಸುತ್ತಿದೆ. ಇಂತಹ ವೇದಿಕೆಗಳು ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಮತ್ತು ಭಾವನಾತ್ಮಕ ಅರಿವನ್ನು ಬೆಳೆಸುತ್ತವೆ,” ಎಂದು ಪ್ರಶಂಸಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಮುದ್ದು ಶಾರದೆಯರಾಗಿ ಸಜ್ಜಾದ ಪುಟಾಣಿಗಳು ಭಾವಭರಿತ ಹಾವಭಾವ ಹಾಗೂ ವೇಷಭೂಷಣದ ಮೂಲಕ ಸಭಾಂಗಣವನ್ನು ಭಕ್ತಿಯ ಪರಿಮಳದಿಂದ ತುಂಬಿಸಿದರು.
ಅದೇ ರೀತಿ ಪುಟ್ಟ ಹುಲಿಗಳು ಉತ್ಸಾಹಭರಿತ ನೃತ್ಯ ಪ್ರದರ್ಶನ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿದವು. ಮಕ್ಕಳ ಶಕ್ತಿ, ಶಿಸ್ತು ಮತ್ತು ಉತ್ಸಾಹ ತೀರ್ಪುಗಾರರು ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ತೀರ್ಪುಗಾರರೂ ಸಹ ಮಕ್ಕಳ ಜೊತೆಗೆ ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.

ಈ ವಿಶೇಷ ದಿನದಲ್ಲಿ ಮಕ್ಕಳು ತಮ್ಮ ಪ್ರತಿಭೆ, ಭಕ್ತಿಭಾವ ಮತ್ತು ನೃತ್ಯ ಕೌಶಲ್ಯದ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪು ಮೂಡಿಸಿದರು. ಮಕ್ಕಳಲ್ಲಿ ಸಂಸ್ಕೃತಿ, ಧಾರ್ಮಿಕ ಅರಿವು ಮತ್ತು ಶಿಷ್ಟಾಚಾರ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ನಿಜಕ್ಕೂ ಪ್ರಶಂಸನೀಯವಾಗಿವೆ.




























