ತಮಿಳು ನೆಲದಲ್ಲಿ ರಾಮಾಯಣದ ಭವ್ಯ ಹೆಗ್ಗುರುತುಗಳಿವೆ; ಸಮಸ್ತ ತಮಿಳರು ಮಂದಿರ ನಿರ್ಮಾಣಕ್ಕಾಗಿ ಕೈಜೋಡಿಸಬೇಕು: ಪೇಜಾವರ ಶ್ರೀ ಕರೆ

ಚೆನ್ನೈ: ತಮಿಳು ನೆಲ, ಭಾಷೆ, ಸಂಸ್ಕೃತಿಯಲ್ಲೂ ರಾಮಾಯಣದ ಸಂದೇಶ ಹಾಗೂ ಮೌಲ್ಯಗಳು ಸಮೃದ್ಧವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿವೆ. ಕಂಬ ರಾಮಾಯಣದಂಥ ಸಾಹಿತ್ಯ ಕೃತಿಗಳು, ಭರತನಾಟ್ಯ ದಂಥ ಶಿಷ್ಟ ಕಲೆ ಹಾಗೂ ಇಲ್ಲಿನ ಜನಪದೀಯ ಸಂಸ್ಕೃತಿಯಲ್ಲೂ ರಾಮಾಯಣದ ಹೆಗ್ಗುರುತುಗಳು ಸಮೃದ್ಧವಾಗಿ ಕಾಣಿಸುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಧನಿಷ್ಕೋಟಿ, ರಾಮಸೇತು, ರಾಮೇಶ್ವರದಂಥಹ ಪವಿತ್ರ ಸ್ಥಳಗಳು ತಮಿಳು ನೆಲದಲ್ಲೇ ಇರುವುದಂತೂ ರಾಮಾಯಣದೊಂದಿಗೆ ತಮಿಳಿನ ನಂಟಿಗೆ ಶ್ರೇಷ್ಠ ಸಾಕ್ಷಿಗಳಾಗಿವೆ ಎಂದು ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥಕ್ಷೇತ್ರ ನಿರ್ಮಾಣ ಟ್ರಸ್ಟ್ ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಚೆನ್ನೈನಲ್ಲಿ ಇಂದು ತಮಿಳಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶ್ರೀಗಳು ಮಾತನಾಡಿದರು.

ದೇಶದ ಕೋಟ್ಯಂತರ ಹಿಂದೂಗಳ ಶತಮಾನಗಳ ಭಕ್ತಿಪೂರ್ವಕವಾದ ಕನಸು ಹಾಗೂ ಲಕ್ಷಾಂತರ ಹಿಂದೂಗಳ ದಶಕಗಳ ಹೋರಾಟ , ಪ್ರಾಣಾರ್ಪಣೆ ‌, ಸುದೀರ್ಘ ನ್ಯಾಯಾಂಗ ವ್ಯಾಜ್ಯದ ಫಲವಾಗಿ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣಕ್ಕೆ ಸುಮುಹೂರ್ತ ಕೂಡಿ ಬಂದಿರುವುದು ಒಂದು ಮಹಾಭಾಗ್ಯವೆಂದೇ ಭಾವಿಸಬೇಕು ಎಂದರು.

ಈ ರಾಮಮಂದಿರ ಆಂದೋಲನದಲ್ಲಿ ನಮ್ಮ ಪೂಜ್ಯ ಗುರುಗಳಾದ ಕಳೆದ ವರ್ಷವಷ್ಟೇ ನಮ್ಮನ್ನಗಲಿದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರೂ ಸಕ್ರಿಯವಾಗಿ ಪಾಲ್ಗೊಂಡು‌ ಅಮೂಲ್ಯ ಮಾರ್ಗದರ್ಶನ ನೀಡಿದ್ದರು. ಅದರ ಫಲವಾಗಿ ಅಯೋಧ್ಯಾ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ನಿರ್ಮಾಣ ಟ್ರಸ್ಟ್ ನ ಓರ್ವ ವಿಶ್ವಸ್ಥರಾಗಿ ಕಾರ್ಯನಿರ್ವಹಿಸುವ ಅವಕಾಶ ನಮಗೆ ಒಲಿದು ಬಂದಿರುವುದು ತುಂಬು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಪ್ರಸ್ತುತ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತು ಪ್ರಾರಂಭಿಕ ಪ್ರಕ್ರಿಯೆಗಳು ನಡೆಯುತ್ತಿವೆ .
ನಾವು ಈ ಸದುದ್ದೇಶಕ್ಕಾಗಿ ದೇಶಾದ್ಯಂತ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸಂಚಾರ ಕೈಗೊಂಡು ಎಲ್ಲ ಧಾರ್ಮಿಕ ಮುಖಂಡರು , ಸಾಧು ಸಂತರು ಮಠಾಧೀಶರು , ಎಲ್ಲ ರಾಜಕೀಯ ಪಕ್ಷಗಳ ನೇತಾರರು , ಉದ್ಯಮಿಗಳು ಹಾಗೂ ಸಮಸ್ತ ಸದ್ಭಕ್ತರೆಲ್ಲರನ್ನೂ ಸಾಧ್ಯವಾದಷ್ಟು ಭೇಟಿಯಾಗಿ ಅವರೆಲ್ಲರ ಪೂರ್ಣ ಶ್ರದ್ಧಾಪೂರ್ವಕ ಸಹಕಾರ , ಪ್ರೋತ್ಸಾಹ ,ನೈತಿಕ ಬೆಂಬಲಗಳು ಈ ಮಹತ್ಕಾರ್ಯಕ್ಕೆ ಅವಶ್ಯವೆಂದು ಅಪೇಕ್ಷಿಸುತ್ತಿದ್ದೇವೆ . ತಾವೂ ಕೂಡಾ ಈ ಕಾರ್ಯದಲ್ಲಿ ನಮ್ಮೊಂದಿಗೆ ಇರಬೇಕೆಂದು ವಿಶೇಷವಾಗಿ ಅಪೇಕ್ಷಿಸುತ್ತೇವೆ ಎಂದರು.

ಈ ನೆಲದ ಧರ್ಮ ಸಂಸ್ಕೃತಿ ಸಾಹಿತ್ಯ ಕಲೆ ಭಾಷೆ ಹೀಗೆ ಪ್ರತಿಯೊಂದರಲ್ಲೂ ಸುದೀರ್ಘ ಅವಧಿಯಿಂದ ರಾಮಾಯಣ ವಿಧವಿಧವಾಗಿ ಹರಿದು ಬಂದಿವೆ. ಪುನರಪಿ ಶ್ರೀ ರಾಮಮಂದಿರ ನಿರ್ಮಾಣಕಾರ್ಯದಲ್ಲಿ ದೇಶದ ಸಮಸ್ತ ಜನತೆ ಭಾಗಿಗಳಾಗಬೇಕು . ಈ ಮೂಲಕ ಮತ್ತೊಮ್ಮೆ ಮಂದಿರದ ಮೂಲಕ ಸಮಸ್ತ ಭಾರತೀಯರ ಸಾಂಘಿಕ ಶಕ್ತಿಯ ಸಂದೇಶ ಜಗತ್ತಿಗೆ ತಲುಪಬೇಕು . ಸನಾತನ ಧರ್ಮ ಈ ನೆಲದ ಅಮೂಲ್ಯ ಹಾಗೂ ಅವಿಚ್ಛಿನ್ನ ಆಸ್ತಿ ಎನ್ನುವುದು ನಮಗೆಲ್ಲರಿಗೂ ಅರಿವಿಗೆ ಬಂದು ರಾಮಭಕ್ತಿಯ ಉತ್ಸಾಹದಿಂದ ಸಮೃದ್ಧ ಸಶಕ್ತ ಸುದೃಢ ಭಾರತ ನಿರ್ಮಿಸಲು ನಾವೆಲ್ಲ ಸಂಕಲ್ಪ ಬದ್ಧರಾಗಬೇಕು ಎಂದು ಆಶಿಸುತ್ತಾ ತಮ್ಮ ಬೆಂಬಲ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ತಿಳಿಸಿದರು .

ಪ್ರಸ್ತುತ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಆ ಸ್ಥಳದ ಮಣ್ಣಿನ‌ ಧಾರಣಾ ಸಾಮರ್ಥ್ಯ ದ ಅಧ್ಯಯನ ನಡೆಯುತ್ತಿದೆ . ಅಲ್ಲಿನ ಮಣ್ಣು ಮರಳು ಮಿಶ್ರಿತ ಜೌಗು ಮಣ್ಣಿನ ಪ್ರದೇಶವಾಗಿರುವುದರಿಂದ ಶತಶತಮಾನಗಳ ಕಾಲ ಮಂದಿರಕ್ಕೆ ಯಾವುದೇ ಹಾನಿ ಆಗಬಾರದೆಂಬ ದೃಷ್ಟಿಯಿಂದ ಈ ಅಧ್ಯಯನ ನಡೆಯುತ್ತಿದೆ. ಮಂದಿರ ನಿರ್ಮಾಣದ ಉಸ್ತುವಾರಿಯನ್ನು ಎಲ್ ಆಂಡ್ ಟಿ ಕಂಪೆನಿಗೆ ವಹಿಸಲಾಗಿದೆ. ಮುಂಬರುವ ಜನವರಿ 15 ರಿಂದ ಫೆಬ್ರವರಿ 27 ರವರೆಗೆ ದೇಶಾದ್ಯಂತ ಮಂದಿರ ಕ್ಕಾಗಿ ನಿಧಿ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಮಂದಿರ ನಿರ್ಮಾಣ ಮತ್ತು ಸುತ್ತಲಿನ ಪರಿಸರದ ಅಭಿವೃದ್ಧಿಗಾಗಿ ಸುಮಾರು 1400 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು .

ಧನ ಸಂಗ್ರಹದ ಜವಾಬ್ದಾರಿಯನ್ನು ಆರ್ ಎಸ್ ಎಸ್ ಮತ್ತು ವಿಶ್ವ ಹಿಂದು ಪರಿಷತ್ ಗೆ ವಹಿಸಲಾಗಿದ್ದು ಈ ಬಗ್ಗೆ ದೇಶಾದ್ಯಂತ ಜಿಲ್ಲಾವಾರು ಸಮಿತಿ ರಚಿಸಿ ಸಮಾಜದ ಎಲ್ಲಾ ಸ್ತರದ ಜನರನ್ನು ತಲುಪುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಧನ‌ಸಂಗ್ರಹ ಮತ್ತು ವಿನಿಯೋಗದಲ್ಲಿ ಶೇಕಡಾ ನೂರು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.