ಮೂವರು ಸಿಎಂಗೆ ಸಿಡಿ ತೋರಿಸಿ, ಬ್ಲ್ಯಾಕ್ ಮೇಲ್ ಮಾಡಿ ಸಚಿವರಾಗಿದ್ದಾರೆ: ಯತ್ನಾಳ್ ಗಂಭೀರ ಆರೋಪ

ವಿಜಯಪುರ: ಬ್ಲ್ಯಾಕ್‌ಮೇಲ್ ಮಾಡಿದವರಿಗೆ, ಹಣ ಕೊಟ್ಟವರಿಗೆ ಸಚಿವ ಸ್ಥಾನ ಸಿಕ್ಕಿದೆ. ಅಲ್ಲದೆ ಕೆಲವರು ಸಿಡಿ ತೋರಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನ ಹೆದರಿಸಿ ಸಚಿವರಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರವಾಗಿ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ವಿರುದ್ಧ ಗುಡುಗಿದರು.
ಒಬ್ಬರನ್ನು ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಇಬ್ಬರು ಸಚಿವರನ್ನು ಮಾಡಿದ್ದಾರೆ. ಈ ಮೂವರು ಕಳೆದ ಮೂರು ತಿಂಗಳಿನಿಂದ ಯಡಿಯೂರಪ್ಪನವರ ಸಂಬಂಧಿಸಿದ ಕೆಲ ಸಿಡಿಗಳನ್ನು ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅದರಲ್ಲಿ ಒಬ್ಬರು ಇಂದು ಸಚಿವರಾಗುತ್ತಿರುವವರು, ಸಿಡಿ ಬ್ಲ್ಯಾಕ್ ಮೇಲ್ ಜೊತೆ ವಿಜಯೇಂದ್ರಗೆ ಹಣ ಸಂದಾಯ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದರು.

ಮೂವರು ನಾಲ್ಕು ತಿಂಗಳ ಹಿಂದೆ ನನ್ನನ್ನು ಭೇಟಿಯಾಗಿದ್ದರು. ನೆಲಮಂಗಲದ ಗೆಸ್ಟ್ ಹೌಸ್ ವೊಂದರಲ್ಲಿ ಸಭೆ ನಡೆಸಿದ್ದರು. ನಾವೆಲ್ಲ ಒಟ್ಟಾಗಿ ಯಡಿಯೂರಪ್ಪನವರನ್ನು ಕೆಳಗಿಳಿಸೋಣ. ನೀವೇ ಮುಖ್ಯಮಂತ್ರಿ ಆಗಿ ಇಲ್ಲ, ನಾನು ಆಗುತ್ತಾನೆ ಎಂದಿದ್ದರು. ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಲು ತಯಾರಿದ್ದೇನೆ ಎಂದು ಹೇಳಿದ್ದರು. ಆಗಲೇ ನನಗೆ ಅಚ್ಚರಿಯಾಗಿತ್ತು ಎಂದರು ಹೇಳಿದರು.