ಉಡುಪಿ: ಪ್ರಧಾನಿ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಂದು ಉಡುಪಿ ಜಿಲ್ಲೆಯ ಬೈಂದೂರಿನ ನವದಂಪತಿಯ ಸ್ವಚ್ಛತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು, ನವೆಂಬರ್ 18ರಂದು ಕುಂದಾಪುರದ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ಮದುವೆಯಾಗಿದ್ದರು. ಮದುವೆಯಾದ ನವದಂಪತಿ ಹನಿಮೂನ್ ಗೆ ಹೋಗುವುದು ಸಾಮಾನ್ಯ. ಆದರೆ ಈ ದಂಪತಿ ಹನಿಮೂನ್ ಗೆ ಹೋಗುವ ಬದಲು ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ್ದರು.
ಇವರು ಲಕ್ಷದ್ವೀಪ ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿ ಸ್ವಚ್ಛ ಮಾಡಬೇಕೆಂದು ಅಂದುಕೊಂಡಿದ್ದರು. ಆದರೆ ಕೊರೊನಾದಿಂದಾಗಿ ತಮ್ಮ ಮನೆ ಹತ್ತಿರವೇ ಸ್ವಚ್ಛ ಮಾಡಿದ್ದಾರೆ. ಸಮುದ್ರ ತೀರದಲ್ಲಿ ಅಲ್ಲಾಲ್ಲಿ ಬಿದ್ದುಕೊಂಡಿದ್ದ ಚಪ್ಪಲ್ ಗಳು, ಆಲ್ಕೋಹಾಲ್ ಬಾಟಲ್ ಗಳು, ವೈದ್ಯಕೀಯ ಬಾಟಲ್ ಗಳು, ಕಸಗಳು, ಪ್ಲಾಸ್ಟಿಕ್ ಗಳನ್ನು ಸ್ವಚ್ಛಗೊಳಿಸಿದ್ದರು.
ಇವರ ಈ ಸಾಮಾಜಿಕ ಕಾರ್ಯ ಹಲವರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಪ್ರಧಾನಿಯೇ ಗುರುತಿಸಿ ಮನ್ ಕಿ ಬಾತ್ ನಲ್ಲಿ ಇಂದಿನ ಯುವ ಪೀಳಿಗೆಗೆ ದಂಪತಿ ದಾರಿದೀಪ ಎಂದಿದ್ದಾರೆ. ಆ ಮೂಲಕ ದಂಪತಿಯ ಸಾಮಾಜಿಕ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.