ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ; ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
ಚಿಕ್ಕಮಗಳೂರು: ಇಲ್ಲಿನ ಮನಮೋಹಕ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ತಪ್ಪಲಿನ ರಸ್ತೆಗಳಲ್ಲಿ ಮಳೆಯಿಂದ ಗುಡ್ಡ ಕುಸಿಯುತ್ತಿರುವುದರಿಂದಾಗಿ ಸಂಚಾರಕ್ಕೆ ತೊಡಕಾಗುತ್ತಿದೆ. ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಡಳಿತವು ಮುಳ್ಳಯ್ಯನಗಿರಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದೆ. ದತ್ತಪೀಠ ಮಾರ್ಗದಲ್ಲಿ ಮುಳ್ಳಯ್ಯನಗಿರಿಗೆ ತಿರುವು ತೆಗೆದುಕೊಳ್ಳುವ ಸ್ಥಳದಲ್ಲೇ ಪೋಲಿಸರು ಬ್ಯಾರಿಕೇಡ್ ಅಳವಡಿಸಿ ಪ್ರವಾಸಿಗರನ್ನು ತಡೆಯುತ್ತಿದ್ದಾರೆ. ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲೂ ಗುಡ್ಡ ಕುಸಿದು ಅರ್ಧದಷ್ಟು ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದ್ದು ಮಳೆ ಮುಂದುವರಿದಲ್ಲಿ ಪೀಠದ ಮಾರ್ಗವೂ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.