ಸುರತ್ಕಲ್: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸೋರಿಕೆ: ಭೀತಿಯ ವಾತಾವರಣ ನಿರ್ಮಾಣ

ಸುರತ್ಕಲ್‌: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದ ಘಟನೆ ರಾ.ಹೆ. 66ರ ಸುರತ್ಕಲ್ ಅಥರ್ವಾ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ವರದಿಯಾಗಿದೆ.

ಗೇಲ್ ಇಂಡಿಯಾ ಕಂಪೆನಿಗೆ ಸೇರಿದ ತೆರೆದ ಲಾರಿಯಲ್ಲಿ ಸಿಎನ್ ಜಿ ಆಟೋ ಅನಿಲವನ್ನು ಪಣಂಬೂರು ಶೇಖರಣಾ ಘಟಕದಿಂದ ಉಡುಪಿ ಕಡೆ ಬೃಹತ್ ಸಿಲಿಂಡರ್ ಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು ಕೆಲಹೊತ್ತು ಸಾರ್ವಜನಿಕರು ಆತಂಕಕ್ಕೀಡಾದರು.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಮತ್ತು ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಹೆದ್ದಾರಿಯ ಎರಡೂ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ದೂರದಲ್ಲೆ ತಡೆದು ನಿಲ್ಲಿಸಿದರು ಎನ್ನಲಾಗಿದೆ. ಈ ಸಂದರ್ಭಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.