ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಯುವಕ, ಯುವತಿಯರಿಗೆ ಮೋಟಾರ್ ಬೈಕ್ ಖರೀದಿಸಲು ಸಹಾಯಧನ: ಸಚಿವ ಕೋಟ

ಉಡುಪಿ: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ರಾಜ್ಯದ ಅರ್ಹ ಒಂದು ಸಾವಿರ ಹಿಂದುಳಿದ ವರ್ಗಗಳ ಯುವಕ, ಯುವತಿಯರಿಗೆ ಮೋಟಾರ್ ಬೈಕ್ ಖರೀದಿಸಲು ಸಹಾಯಧನ ವಿತರಿಸುವ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರ್ಚುವಲ್ ವೇದಿಕೆ ಮೂಲಕ ಬೆಂಗಳೂರು ನಗರ ಜಿಲ್ಲೆಯ ಅರ್ಹ ಯುವಕರಿಗೆ ಮೋಟಾರ್ ಬೈಕ್‌ ಸಾಂಕೇತಿಕವಾಗಿ ನೀಡುವ ಮೂಲಕ ಚಾಲನೆ ನೀಡಿದರು.

ಇತ್ತೀಚೆಗೆ ಇ-ವಾಣಿಜ್ಯ ಸಂಸ್ಥೆಗಳು ಮನೆ ಬಾಗಿಲಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುವುದು ಸಾಮಾನ್ಯವಾಗಿದೆ. ಇಂತಹ ಉತ್ಪನ್ನಗಳನ್ನು ಸರಬರಾಜು ಮಾಡುವ 1000 ಯುವಕರಿಗೆ ಮೋಟಾರ್‌ ಬೈಕ್‌ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ತಲಾ 25,000 ರೂ. ಗಳಂತೆ 2.50 ಕೋಟಿ ರೂ. ಆರ್ಥಿಕ ನೆರವು ನೀಡುವ ಯೋಜನೆಯನ್ನು ಜಾರಿಗೊಳಿಸಲಾಯಿತು.

Zomato, Swiggy, Flipkart, Dominos, Amazon ಮೊದಲಾದ ಕಂಪೆನಿ ಹಾಗೂ ಸಂಸ್ಥೆಗಳು ಉದ್ಯೋಗ ಪಡೆಯಲು ಮೋಟಾರ್ ಬೈಕ್ ಹೊಂದಿರಬೇಕೆಂಬ ನಿಬಂಧನೆಯನ್ನು ಪೂರೈಸಲು, ಹಿಂದುಳಿದ ವರ್ಗಗಳ 1000 ನಿರುದ್ಯೋಗಿ ಯುವಕರಿಗೆ ಬೈಕ್ ಕೊಂಡುಕೊಳ್ಳಲು ಬ್ಯಾಂಕುಗಳು, ಸಹಕಾರ ಸಂಘಗಳು ಹಾಗೂ ಅಂಗೀಕೃತ ಸರ್ಕಾರೇತರ ಸಹಯೋಗದೊಂದಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ₹ 25 ಸಾವಿರ ಸಹಾಯಧನ ನೀಡುವ ಮೂಲಕ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.