ಬೆಂಗಳೂರು: ಸಿಎಂ ಬದಲಾವಣೆ ವಿಚಾರ ತೀವ್ರಗೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಕಸರತ್ತು ಜೋರಾಗಿದ್ದು, ಕೆಲವು ನಾಯಕರಿಂದ ಸಿಎಂ ಪಟ್ಟಕ್ಕೇರಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಇಬ್ಬರು ನಾಯಕರ ಮಧ್ಯೆ ಪ್ರಬಲ ಪೈಪೋಟಿ ಇದೆ ಎನ್ನಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯ ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಹುದ್ದೆಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವ, ಧಾರವಾಡ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿರುವ ಮುರುಗೇಶ್ ನಿರಾಣಿ ಇಬ್ಬರೂ ಕೂಡ ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ.
ಇನ್ನು ಜೋಶಿ ಅವರು ಬ್ರಾಹ್ಮಣ ಸಮುದಾಯದವರಾಗಿದ್ದು, ನಿರಾಣಿ ಪ್ರಬಲ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದಾರೆ. ಸದ್ಯ ಒಬ್ಬರು ಕೇಂದ್ರದಲ್ಲಿ ಸಚಿವರಾದ್ರೆ, ಇನ್ನೊಬ್ಬರು ರಾಜ್ಯದಲ್ಲಿ ಸಚಿವರಾಗಿದ್ದಾರೆ. ಇಬ್ಬರು ಕೂಡ ತೆರೆಮರೆಯಲ್ಲಿ ತಮ್ಮದೇ ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ.