ಉಡುಪಿ: ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಅಂಬಲಪಾಡಿಯ ಮನೆ ಈಶಾವಾಸ್ಯಮ್ ನಲ್ಲಿ ಆಚಾರ್ಯರ 45ನೇ ದಿನದ ಪುಣ್ಯತಿಥಿ ಹಾಗೂ ಸೌರ ಮಧ್ವ ನವಮಿ ಪ್ರಯುಕ್ತ ಶ್ರೀ ಬಾಳೆಗಾರು ಮಠದ ಶ್ರೀ ರಘುಭೂಷಣ ತೀರ್ಥ ಶ್ರೀಪಾದರು ತಮ್ಮ ಪಟ್ಟದ ದೇವರಾದ ಶ್ರೀ ಸೀತಾರಾಮ- ಶ್ರೀ ಯೋಗಾನೃಸಿಂಹ ದೇವರ ಪೂಜೆ ನೆರವೇರಿಸಿ ಭಿಕ್ಷೆ ,ಮಾಲಿಕೆ ಮಂಗಲಾರತಿ ಸ್ವೀಕರಿಸಿದರು.
ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು, ಎರಡು ಡಿಸೆಂಬರ್ ಗಳ ಅವಧಿಯಲ್ಲಿ ಶ್ರೀ ವಿಶ್ವೇಶತೀರ್ಥರು ಮತ್ತು ಬನ್ನಂಜೆ ಗೋವಿಂದಾಚಾರ್ಯರು ಹೀಗೆ ಇಬ್ಬರು ಮಹಾನ್ ಚೇತನಗಳನ್ನು ನಾಡು ಕಳೆದು ಕೊಂಡಿದೆ. ಇಬ್ಬರೂ ಹತ್ತಾರು ವಿಭಿನ್ನ ಪ್ರತಿಭೆಗಳ ಸಂಗಮವಾಗಿದ್ದರು ಹಾಗೂ ಬಹುತೇಕ ಸಮಕಾಲೀನರೇ ಆಗಿದ್ದು ಸಮಾನಾಂತರವಾಗಿ ಮಾಧ್ವ ಸಮಾಜಕ್ಕೆ ಹಾಗೂ ನಾಡಿಗೆ ದೇಶಕ್ಕೆ ಮಹೋನ್ನತ ಕೊಡುಗೆ ಸಲ್ಲಿಸಿದವರು ಎಂದು ಅಭಿಪ್ರಾಯಪಟ್ಟರು.
ನಾವೆಲ್ಲ ಕೇವಲ ಜೀವರುಗಳಷ್ಟೇ. ಆದರೆ ಅವರಿಬ್ಬರೂ ಮಹಾಚೇತನಗಳು. ಪ್ರಪಂಚದಲ್ಲಿ ಎಲ್ಲರೂ ಚೇತನರಾಗಲು ಸಾಧ್ಯವಿಲ್ಲ. ಅಪೂರ್ವಸಾಧನೆ ಸಿದ್ಧಿಗಳಿಂದ ಸಾವಿನಾಚೆಗೂ ತಮ್ಮ ಕೊಡುಗೆಗಳಿಂದ ಜೀವಂತ ಇರಬಲ್ಲವರು ಮಾತ್ರ ಚೇತನಗಳೆನಿಸುತ್ತಾರೆ. ಈ ಇಬ್ಬರೂ ಅಂಥ ಮಹನೀಯರ ಸಾಲಿಗೆ ಸೇರುತ್ತಾರೆ ಎಂದು ಬಣ್ಣಿಸಿದರು.
ಈ ಇಬ್ಬರು ಮಹಾನೀಯರ ಕೊಡುಗೆ ಹಾಗೂ ಮಹೋನ್ನತ ವ್ಯಕ್ತಿತ್ವವನ್ನು ಬಣ್ಣಿಸಲು ಸಾಧ್ಯವಿಲ್ಲ. ಒಂದು ಸಿದ್ಧಾಂತಕ್ಕೆ ತಮ್ಮ ನಿಷ್ಠೆ ಶ್ರದ್ಧೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪರಿಶುದ್ಧ ಮನಸ್ಸಿನಿಂದ ಸಲ್ಲಿಸಿದವರು. ಸುದೀರ್ಘ ತಪಸ್ಸಿನ ರೀತಿಯ ಜೀವನದಲ್ಲಿ ನಾಡಿನಲ್ಲಿ ಆಧ್ಯಾತ್ಮದ ರಹದಾರಿಯನ್ನೇ ನಿರ್ಮಿಸಿಕೊಟ್ಟಿದ್ದಾರೆ. ನಾವೆಲ್ಲ ಅವರ ಕೃತಿಗಳ ಓದು ಅವರು ಬದುಕಿದ ರೀತಿಯಲ್ಲಿ ಸರಳ, ಪರಿಶುದ್ಧ ಜೀವನ ನಡೆಸುವ ಮೂಲಕ ಆ ರಹದಾರಿಯಲ್ಲಿ ಮುನ್ನಡೆಯುವುದೇ ಆ ಇಬ್ಬರೂ ಮಹಾಚೇತನಗಳಿಗೆ ಸಲ್ಲಿಸುವ ಅರ್ಹ ಗೌರವವಾಗಿದೆ ಎಂದರು.