ಕಾಪು: ಕಾಪು ವೃತ್ತ ನಿರೀಕ್ಷಕರ ನೇತೃತ್ವದ ಪೊಲೀಸರ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರು ಅಂತರ್ ಜಿಲ್ಲಾ ಚೋರರನ್ನು ಬಂಧಿಸಿದ್ದು, ಬಂಧಿತರಿಂದ ಲಾರಿ, ಸ್ವಿಫ್ಟ್ ಕಾರು, ಮೊಬೈಲ್ ಪೋನ್ ಹಾಗೂ ನಗದು ಸಹಿತ ₹12.47 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪಲಿಮಾರು ಗ್ರಾಮದ ಅಡ್ವೆ ನಿವಾಸಿ ಆಶ್ರಫ್ (27), ಉತ್ತರ ಕನ್ನಡ ಜಿಲ್ಲೆ ಮೂಲದ ಪ್ರಸ್ತುತ ಪಡುಬಿದ್ರಿ ಕಂಚಿನಡ್ಕ ಶಾಲೆ ಬಳಿ ವಾಸವಿರುವ ಮುನ್ನಾ ಯಾನೆ ಮಜೀರ್ ಶೇಖ್ (38), ಶಿವಮೊಗ್ಗ ಜಿಲ್ಲೆಯ ಮಂಜುನಾಥ ಯಾನೆ ಮಂಜು (31) ಹಾಗೂ ತೀರ್ಥಹಳ್ಳಿ ನಿವಾಸಿ ಅರುಣ (26) ಎಂದು ಗುರುತಿಸಲಾಗಿದೆ.
ಕಳೆದ ಜೂ. 16ರಂದು ರಾತ್ರಿ ಮುದರಂಗಡಿ ಸಾಂತೂರು ಅಳುಂಬೆ ನಾಗಯ್ಯ ಶೆಟ್ಟಿ ಎಂಬವರ ವೈಶಾಲಿ ಕನ್ಸ್‌ಸ್ಟ್ರಕ್ಷನ್ ಡಾಂಬಾರು ಪ್ಲಾಂಟ್‌ನ ಗೇಟಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು ಸೈಟ್‌ನಲ್ಲಿ ನಿಲ್ಲಿಸಲಾಗಿದ್ದ ₹ 8 ಲಕ್ಷ ಮೌಲ್ಯದ ಲಾರಿಯನ್ನು ಕಳವು ಮಾಡಿದ್ದರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆಗಾಗಿ ಕಾಪು ವೃತ್ತ ಸಿಐ ಪ್ರಕಾಶ್ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿತ್ತು.
ತನಿಖೆಗೆ ಇಳಿದ ಪೊಲೀಸರು ಕಳವಾದ ಲಾರಿಯನ್ನು ತೀರ್ಥಹಳ್ಳಿಯಲ್ಲಿ ಪತ್ತೆ ಹಚ್ಚಿದ್ದರು. ಆರೋಪಿಗಳಾದ ಮಂಜುನಾಥ ಯಾನೆ ಮಂಜು, ಅರುಣ, ಎಂಬವರನ್ನು ಬಂಧಿಸಿ, ಅವರಿಂದ ಲಾರಿ ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಪೋನ್‌ಗಳನ್ನು ಸ್ವಾಧಿನಪಡಿಸಿಕೊಂಡಿದ್ದರು. ಬಳಿಕ ಜೂ. 28ರಂದು ಮರವಂತೆ ಬಳಿ ಟಿಪ್ಪರ್ ಲಾರಿಯನ್ನು ಕಳವು ಮಾಡಿ ಮಾರಾಟ ಮಾಡಿದ ಆರೋಪಿಗಳಾದ ಆಶ್ರಫ್, ಮುನ್ನಾ ಯಾನೆ ಮಜೀರ್ ಶೇಖ್ ಎಂಬವರನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾಪು ಪ್ರಭಾರ ಸಿಐ ಸಂಪತ್ ಕುಮಾರ್ ಮತ್ತು ಸಿಐ ಪ್ರಕಾಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪಡುಬಿದ್ರಿ ಕ್ರೈಂ ಎಸ್ಸೈ ಜಯ ಕೆ., ಎಸ್ಸೈ ದಿಲೀಪ್ ಜಿ.ಆರ್., ಎಎಸ್ಸೈ ದಿವಾಕರ್ ಸುವರ್ಣ, ಕಾಪು ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಗಳಾದ ಸುಧಾಕರ್, ಪ್ರವೀಣ್ ಕುಮಾರ್, ಶರಣಪ್ಪ , ಸಂದೀಪ್, ಸುಕುಮಾರ್, ಪಡುಬಿದ್ರಿ ಠಾಣಾ ಸಿಬ್ಬಂದಿಗಳಾದ ಹೇಮರಾಜ್, ರಾಜೇಶ್, ಕರಿಬಸಜ್ಜ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.