ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿಅತಿರುದ್ರ ಮಹಾಯಾಗದ ಒಂಬತ್ತನೇ ದಿನದಂದು ಪೂಜಾ ಕಾರ್ಯಕ್ರಮಗಳ ಬಳಿಕ ಸಂಜೆ 7 ಗಂಟೆಗೆ ವಾರಣಾಸಿಯ ಗಂಗಾರತಿ ಮಾದರಿಯ ‘ಶಿವಾರತಿ’ ನಡೆಯಿತು.
ಶಿವಾರತಿಯ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಡೈನಾಮಿಕ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ನಾಸಿಕ್ ನ ಸಿವಿಲ್ ಇಂಜಿನಿಯರ್ ಗೋಪಾಲ್ ಚಕ್ನಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ. ಕೃಷ್ಣಪ್ರಸಾದ್ ಮಾತನಾಡಿ, ಉಡುಪಿಯಲ್ಲಿ ನೆಲೆಸಿರುವುದು ನಮ್ಮ ಪುಣ್ಯ. ಶಿವಪಾಡಿಯಲ್ಲಿ ನಡೆದ ಶಿವಾರತಿ, ಕಾಶಿಯಲ್ಲಿ ನಡೆಯುವ ಶಿವಾರತಿಗಿಂತಲೂ ಅದ್ಭುತವಾಗಿತ್ತು. ಇಂತಹ ಅತಿರುದ್ರ ಮಹಾಯಾಗವನ್ನು ಕಾಣುವ ಭಾಗ್ಯವನ್ನು ಎಲ್ಲರಿಗೂ ಕಲ್ಪಿಸಿಕೊಟ್ಟ ಮಹೇಶ್ ಠಾಕೂರ್ ಅವರ ಪ್ರಯತ್ನವನ್ನು ಶ್ಲಾಘಿಸಿದರು.
ಮಣಿಪಾಲ ಮಾಹೆಯ ಪ್ರವೇಶ ನಿರ್ದೇಶಕ ಮಹೇಶ್ ಪ್ರಭು, ಅಂತರಾಷ್ಟ್ರೀಯ ಹೆಸರಾಂತ ಸಂಗೀತ ಕಲಾವಿದೆ ಸಂಗೀತ ಕಟ್ಟಿ ಕುಲಕರ್ಣಿ, ಹೋಮ ಕುಂಡದ ಸೇವಾಕರ್ತೃ ಕಾರ್ತಿಕ್ ನಾಯಕ್, ವಾರಣಾಸಿಯ ವಿಶ್ವನಾಥ ದೇವಸ್ಥಾನದ ಕಾಶಿ ಮಹಾರತಿ ತಂಡದ ಮುಖ್ಯಸ್ಥ ಪಂಡಿತ್ ಮೋಹಿತ್ ಉಪಾಧ್ಯಾಯ, ಉಡುಪಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀಶ ಕೊಡವೂರು, ಜೋಗಿ ಸಮಾಜದ ಅಧ್ಯಕ್ಷ ಪಿ. ಸುರೇಶ್ ಕುಮಾರ್ ಮುದ್ರಾಡಿ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ನಗರಸಭಾ ಸದಸ್ಯರು, ದೇವಸ್ಥಾನದ ಟ್ರಸ್ಟಿಗಳು ಮತ್ತು ಯಾಗ ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಶ್ರೀಮತಿ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.