ಶಿರ್ವ: ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ- ಮೂರೇ ಗಂಟೆಯಲ್ಲಿ ಮೂವರು ಆರೋಪಿಗಳ ಬಂಧನ

ಉಡುಪಿ: ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಮೂರು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುರ್ಕಾಲು ಗ್ರಾಮದ ಶಂಕರಪುರದ ಹೆಲೆನ್ ಡಿಸೋಜ(69) ಎಂಬವರು ತನ್ನ ಮನೆಯ ಹಿಂಬದಿಯಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ಬಾಡಿಗೆ ರೂಮ್ ಇಲ್ಲದಕ್ಕೆ ಇವರು ಅಲ್ಲೇ ಸಮೀಪದ ಬೇರೆ ಮನೆ ಕಡೆಗೆ ಹೋದರು.
ನಂತರ ಅವರಲ್ಲಿ ಒಬ್ಬ ವಾಪಾಸ್ಸು ಹೆಲೆನ್ ಡಿಸೋಜ ಅವರ ಬಳಿಗೆ ಬಂದು, ಮೊಬೈಲ್ ನಂಬರ್ ಕೇಳಿದನು. ಹೆಲೆನ್ ಡಿಸೋಜ ಮೊಬೈಲ್ ನಂಬರ್ ಹೇಳುತ್ತಿರುವಾಗ ಆತ ಹೆಲೆನ್ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 3,50,000ರೂ. ಮೌಲ್ಯದ 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋದನು. ಆಗ ಆತನನ್ನು ತಡೆಯಲು ಬಂದ ಹೆಲೆನ್ ಅವರ ಅಕ್ಕ ತೆರಜ ಎಂಬವರನ್ನು ದೂಡಿ ಹಾಕಿ ಮೂವರು ಬೈಕ್‌ನಲ್ಲಿ ಪರಾರಿಯಾದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿರ್ವ ಠಾಣಾಧಿಕಾರಿ ನೇತೃತ್ವದಲ್ಲಿ ಕ್ಷೀಪ್ರ ಕಾರ್ಯಾಚರಣೆ:
ಕೂಡಲೇ ಕಾರ್ಯಪ್ರವರ್ತರಾದ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ ನೇತೃತ್ವದ ಸಿಬ್ಬಂದಿ‌ ತಂಡವು ಘಟನಾ ಸ್ಥಳಕ್ಕೆ ತೆರಳಿ ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿ, ಕೂಡಲೇ ಅಲ್ಲಿಯ ಸಮೀಪದಲ್ಲಿ ಲಭ್ಯವಿರುವ ಸಿಸಿಟಿವಿಗಳನ್ನು ಪರಿಶೀಲಿಸಿದರು. ಅದರಲ್ಲಿ ಪಲ್ಸರ್ ಬೈಕ್‌ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ಕಂಡುಬಂತು. ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಿ, ಸಿಸಿಟಿವಿ ಫೂಟೇಜ್‌ಗಳನ್ನು ಕಳುಹಿಸಲಾಯಿತು.
ಅದರಂತೆ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ನಾಕಾಬಂದಿ ನಡೆಸಿ ಆರೋಪಿಗಳನ್ನು ಕೃತ್ಯ ನಡೆದ ಕೇವಲ ಮೂರರಿಂದ ನಾಲ್ಕು ಗಂಟೆಯ ಒಳಗಾಗಿ ಶಿರೂರ ಚೆಕ್ ಪೋಸ್ಟ್‌ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿದರು.
ಶಿರ್ವ ಪೊಲೀಸರು ಆರೋಪಿಗಳಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಕಾಪು ವೃತ್ತ ನಿರೀಕ್ಷಿಕ ಕಾಪು ಅಜ್ಜತ್ ಅಲಿ ನೇತೃತ್ವದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಎಸ್ಸೆ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ ಅಲಿ, ಹರೀಶ, ಯಲಾಲ್ಲಿಂಗ ಸುರೇಶ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ನಡೆಸಿದ್ದಾರೆ.