ಉಡುಪಿ : ಶಿರಾ ಮತ್ತು ಆರ್.ಆರ್. ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಡಾ. ರಾಜೇಶ್ ಗೌಡ ಮತ್ತು ಮುನಿರತ್ನ ಅವರ ಜಯಭೇರಿ ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಈ ಗೆಲುವು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಜನಪರ ಆಡಳಿತ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಸಂಘಟನಾ ಚಾತುರ್ಯಕ್ಕೆ ಸಂದ ಗೌರವ. ಮಾತ್ರವಲ್ಲದೆ ರಾಜ್ಯ ಸರಕಾರ ಅಭಿವೃದ್ಧಿ ಕೆಲಸ ಕಾರ್ಯಗಳ ಜೊತೆಗೆ ಕೊರೊನಾ ಮಹಾಮಾರಿ ಮತ್ತು ನೆರೆ ಹಾವಳಿಯ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿ ಜನತೆಯ ವಿಶ್ವಾಸ ಗಳಿಸಿರುವುದ್ದಕ್ಕೆ ಸಾಕ್ಷಿ ಎನಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಆಡಳಿತದ ಪರಿಣಾಮವಾಗಿ ಬಿಹಾರ ಸಹಿತ ದೇಶದೆಲ್ಲೆಡೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಮೈತ್ರಿ ಕೂಟ ಪ್ರಚಂಡ ವಿಜಯ ದಾಖಲಿಸಿರುವುದು ಭವಿಷ್ಯದಲ್ಲಿ ಇನ್ನಷ್ಟು ವಿಜಯ ಯಾತ್ರೆಗಳಿಗೆ ದಿಕ್ಸೂಚಿಯಂತಿದೆ ಎಂದರು.
ಕೇವಲ ಅಪಪ್ರಚಾರದ ಮೂಲಕ ಚುನಾವಣೆ ಗೆಲ್ಲಬಹುದೆಂಬ ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರ ಹುಸಿಯಾಗಿದೆ ಎಂದಿದ್ದಾರೆ.
ರಾಜ್ಯದ ಪ್ರಬುದ್ಧ ಜನತೆ ಕೇವಲ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕೆ ಮಾತ್ರ ಬೆಲೆ ನೀಡುತ್ತಾರೆ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು ನಾಯಕರೊಳಗಿನ ಭಿನ್ನಮತ ಈ ಫಲಿತಾಂಶದ ಮೂಲಕ ಇನ್ನಷ್ಟು ಸ್ಪಷ್ಟಗೊಂಡಿದೆ ಎಂದು ಟೀಕಿಸಿದ್ದಾರೆ.