ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್: ಇಬ್ಬರು ವಿದ್ಯಾರ್ಥಿಗಳಿಗೆ ಕಾರಂತ ಬಾಲ ಪುರಸ್ಕಾರ.

ಕುಂದಾಪುರ: ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರ ನಾರಾಯಣದ ಪ್ರತಿಭಾ ಪರಂಪರೆಗೆ ಮತ್ತೊಂದು ಸುವರ್ಣ ಕಿರೀಟ ಸೇರ್ಪಡೆಗೊಂಡಿದೆ. ಸಂಸ್ಥೆಯ ಹೆಮ್ಮೆಯ ಬಾಲ ಪ್ರತಿಭೆಗಳಾದ ಪನ್ನಗ ಕೆ. ಆರೂರ್ ಹಾಗೂ ಕು. ಸ್ಮಿತಾ ಬಿ. ಕೆ. ಇವರಿಗೆ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಮಾತಿನಂತೆ 2025ರ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಲಭಿಸಿರುವುದು ಸಂಸ್ಥೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ.

ಬಹುಮುಖ ಪ್ರತಿಭೆಯಾದ ಪನ್ನಗ ಕೆ. ಆರೂರ್. ಅವರು ಕೇವಲ ನಾಲ್ಕನೇ ವಯಸ್ಸಿನಲ್ಲಿಯೇ ಕಲಾರಾಧನೆಗೆ ತೊಡಗಿಕೊಂಡು, ಐದನೇ ವಯಸ್ಸಿನಲ್ಲಿ ಯಕ್ಷಸಿರಿ ಮಕ್ಕಳ ಬಾಲ ಮೇಳದಲ್ಲಿ ವೇಷಧಾರಿಯಾಗಿ ತನ್ನ ಕಲಾ ಪಯಣವನ್ನು ಆರಂಭಿಸಿದ್ದಾರೆ.

ಯಕ್ಷಗಾನದಿಂದ ವಾದ್ಯಗಾನದವರೆಗೆ ಅವರ ಪ್ರಯಾಣ ನಿರಂತರವಾಗಿದ್ದು, ಕೊಳಲು, ಚಂಡೆ, ಮದ್ದಲೆ, ಕಂಜಿರ ಸೇರಿದಂತೆ ಅನೇಕ ವಾದ್ಯಗಳಲ್ಲಿ ಆಸಕ್ತಿ ತಳೆದು, ವಿವಿಧ ವೇದಿಕೆಗಳಲ್ಲಿ ತನ್ನ ಅಪೂರ್ವ ವಾದ್ಯ ಕೌಶಲ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.

ಇನ್ನೊರ್ವ ಪ್ರತಿಭಾನ್ವಿತೆ ಸ್ಮಿತಾ ಬಿ. ಕೆ ಬಾಲ್ಯದಲ್ಲಿಯೇ ಕಲಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇವರು ಈಗಾಗಲೇ ‘ಶಂಕ್ರ’ ಎಂಬ ಟೆಲಿಫಿಲ್ಮ್‌ನಲ್ಲಿ ಬಾಲ ನಟಿಯಾಗಿ ಅಭಿನಯಿಸಿ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಅಭಿನಯದ ಜೊತೆಗೆ ನೃತ್ಯ, ಸಂಗೀತ ಹಾಗೂ ಯಕ್ಷಗಾನ ಕ್ಷೇತ್ರಗಳಲ್ಲಿಯೂ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿರುವ ಸ್ಮಿತಾ, ವಿಶೇಷವಾಗಿ ಯಕ್ಷಸಿರಿ ಮೇಳದಲ್ಲಿ ಭಾಗವತಿಕೆಯ ಛಾಪನ್ನು ಮೂಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಹರ್ಷ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಇನ್ನೂ ಎತ್ತರದ ಸಾಧನೆಗಳನ್ನು ತಲುಪಲಿ ಎಂದು ಹಾರೈಸಿದ್ದಾರೆ.