ಉಡುಪಿ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡ್ತೀನಿ ಅಂತ ನಾನು ಹೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಗೃಹ ಸಚಿವರು ತನಿಖೆ ಮಾಡ್ತೇನೆ ಅಂದಿದ್ದಾರೆ. ಕೂಡಲೇ ತನಿಖೆ ನಡೆಸಿ ರಾಜ್ಯದ ಜನತೆಗೆ ಸತ್ಯ ತಿಳಿಸಿ. ಸಿಡಿ ಇತ್ತೋ ಇಲ್ವೋ, ರೆಕಾರ್ಡ್ ಇತ್ತೋ ಇಲ್ವೋ ಎನ್ನುವುದು ಎಲ್ಲಾ ಹೊರಬರಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದವರಾಗಿ ಸುಮ್ಮನೆ ಕಣ್ಣುಮುಚ್ಚಿ ಕೂತುಕೊಳ್ಳಲು ಆಗಲ್ಲ. ರಾಜ್ಯದ ಜನತೆಗೆ ತಿಳಿಸೋದು ನನ್ನ ಜವಾಬ್ದಾರಿ. ಏನು ವ್ಯವಹಾರ ಏನು ರಾಜಕಾರಣ ಜನರಿಗೆ ತಿಳಿಸಿ ಎಂದು ಸವಾಲು ಹಾಕಿದರು.
ಈಗಾಗಲೇ ಓರ್ವ ಮಾದ್ಯಮ ಕಾರ್ಯದರ್ಶಿ ರಾಜೀನಾಮೆ ಕೊಟ್ಟಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಅಂದರೆ ರಸ್ತೆಯಲ್ಲಿ ಹೋಗುವ ವ್ಯಕ್ತಿಯಲ್ಲ. ಸಾಮಾನ್ಯ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲಾ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿಬರುತ್ತೆ. ಅವರ ಎಲ್ಲಾ ವ್ಯವಹಾರಗಳು ನಮಗೆ ಗೊತ್ತಿಲ್ಲದೆ ಏನಿಲ್ಲ. ಸರ್ಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ. ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ ಎಂದು ಗುಡುಗಿದರು.
ಸಂಸಾರದಲ್ಲಿ ಯಾವುದೇ ಬಿರುಕಿರಲಿಲ್ಲ ಎಂದು ಈಗಾಗಲೇ ಸಂರೋಷ್ ಪತ್ನಿ ಹೇಳಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದಾರೆ. ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿತ್ತು. ಈ ವಯಸ್ಸಲ್ಲಿ ಸುಮ್ಮನೆ ಯಾರೂ ಆತ್ಮಹತ್ಯೆ ಮಾಡ್ಕೊಳಲ್ಲ. ಅಧಿಕಾರಕ್ಕೆ ತೊಂದರೆ ಆಗಿರಬೇಕು. ಹೆಸರಿಗೆ ಕುಂದು ಬಂದಿರಬಹುದು. ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ಳುತ್ತಾ ಇದಾರೆ ಎಂದು ಹೇಳಿದರು.
ನಾನೇನೂ ಈಶ್ವರಪ್ಪ ಸುದ್ದಿ ಮಾತಾಡಿಲ್ಲಮ ಯಾರ್ಯಾರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ನಮಗೆ ಅವಶ್ಯಕತೆ ಇಲ್ಲದ ವಿಚಾರ ಅಂತ ಸುಮ್ಮನೆ ಇದ್ದೇವೆ ಎಂದು ತಿಳಿಸಿದ್ದಾರೆ