ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಒದಗಿಸುವಂತೆ ಮನವಿ

ಉಡುಪಿ: ಶಿವಗಿರಿ ಮಠ ವರ್ಕಲ, ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ನಾಳೆ (ಡಿ.3) ಮಂಗಳೂರು ವಿವಿ ಕ್ಯಾಂಪಸ್ ಮಂಗಳಗಂಗೋತ್ರಿಯಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮತ್ತು‌ ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್ ನಲ್ಲಿ 500 ಕೋಟಿ ರೂ. ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ತಿಳಿಸಿದರು.

ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣವನ್ನು ದೊರಕಿಸುವಲ್ಲಿ ಅಭಿವೃದ್ಧಿ ನಿಗಮ ಶ್ರಮಿಸಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ ತರಬೇತಿ, ಐಎಎಸ್, ಐಪಿಎಸ್ ಉನ್ನತ ಶಿಕ್ಷಣಕ್ಕೆ ತರಬೇತಿ ಇತ್ಯಾದಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಸ್ವ ಉದ್ಯೋಗ ನಡೆಸಲು ತರಬೇತಿ ಮತ್ತು ಸಾಲ ಸೌಲಭ್ಯ, ಸಮುದಾಯಗಳ ಕುಲಕಸುಬಾಗಿರುವ ನೀರಾ ಉತ್ಪಾದನೆ, ಶೇಂದಿ ಇಳಿಸುವ ಬಗ್ಗೆ ತರಬೇತಿಯನ್ನು ನೀಡಿ ಆಧುನಿಕ ಸ್ಪರ್ಶವನ್ನು ನೀಡುವುದು. ನಾಟಿವೈದ್ಯ ಮತ್ತು ಆಯುರ್ವೇದಕ್ಕೆ ಪ್ರೋತ್ಸಾಹವನ್ನು ನೀಡುವುದು. ಹಾಗೆಯೇ ಕಲ್ಪರಸ ತಯಾರಿ ಉದ್ಯಮ ಹಾಗೂ ಪ್ರವಾಸೋದ್ಯಮ, ಸೇವಾಧರಿತ ಉದ್ಯಮ ಮತ್ತು ಇನ್ನಿತರ ಉದ್ಯಮ ಸ್ಥಾಪನೆಗೆ ಸಬ್ಸಿಡಿಯೊಂದಿಗೆ ಸರ್ವ ಸಹಕಾರ ನೀಡುವುದು. ಹೆಚ್ಚು ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು. ಕುಲಕಸುಬಾದ ಶೇಂದಿ, ಕಲ್ಪರಸ ತಯಾರಿ ಉದ್ಯಮದ ಮೌಲ್ಯವರ್ಧನೆಗಾಗಿ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಸೆಂಟರ್ ಸ್ಥಾಪಿಸುವುದು. ಡಿಜೀಟಲಿಕರಣದ ಮಾಹಿತಿ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು.

ಗರಡಿಗಳ ಅರ್ಚಕರಿಗೆ ಮತ್ತು ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿಕ ಕೇಂದ್ರದ ಅರ್ಚಕರು ಮತ್ತು ಸಹಾಯಕರಿಗೆ ಮಾಸಾಶನ ನೀಡುವುದು. 60 ವರ್ಷದ ನಂತರ ಪಿಂಚಣಿ ಸೌಲಭ್ಯವನ್ನು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಸಂತೋಷ್ ಕುಮಾರ್ ಬೈರಂಪಳ್ಳಿ, ಅಶೋಕ್ ಕುಮಾರ್ ಬೀಜಾಡಿ, ಮಹೇಶ್ ಅಂಚನ್ ಇದ್ದರು.