ಬೆಳಗಾವಿ: ರಿಯಲ್ ಎಸ್ಟೇಟ್ ಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಅತಿ ಚಿಕ್ಕದಾಗಿ ತುಂಡರಿಸುವ ಸೈಟುಗಳಿಗೆ ಪಹಣಿ ಮತ್ತು 11 ಇ ಅಡಿ ನಕ್ಷೆ ಮಾಡಿಕೊಡುವುದನ್ನು ನಿಷೇಧಿಸಿದೆ.
ಈ ಸಂಬಂಧ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂಮಾರಾಟ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ಅದರ ಪ್ರಕಾರ ಇನ್ಮುಂದೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಮತ್ತು ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೇ ನಂಬರ್‌ಗಳನ್ನು (ಹಿಸ್ಸಾ ನಂಬರ್ ಒಳಗೊಂಡಂತೆ) ಹೊಸದಾಗಿ ಸೃಜಿಸುವಂತಿಲ್ಲ. ಕೃಷಿ ಭೂಮಿಯಲ್ಲಿ ನಿವೇಶನಗಳನ್ನು ರೂಪಿಸುವುದು ಮತ್ತು ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ.
ಕರ್ನಾಟಕ ನಗರಾಭಿವೃದ್ಧಿ ಕಾಯ್ದೆಯಡಿ ನಿಯಮ ಬದ್ಧವಾಗಿ ಅನುಮೋದನೆ ಪಡೆಯದೇ ಕೃಷಿ ಭೂಮಿಗಳನ್ನು ನಿವೇಶನ ಮತ್ತು ಕಟ್ಟಡಗಳಿಗಾಗಿ ಪರಿವರ್ತಿಸುತ್ತಿರುವ ಬಗ್ಗೆ ರಾಜ್ಯದಾದ್ಯಂತ ದೂರುಗಳು ಬಂದಿದ್ದವು. ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಭೂಮಿಯನ್ನು ತುಂಡು– ತುಂಡು ಮಾಡುವುದನ್ನು ನಿರ್ಬಂಧಿಸಿ, ಪಹಣಿ ಮಾಡದೇ ಇರಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
ಹೊಸ ಆದೇಶದಲ್ಲಿ ಏನಿದೆ?
* ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಮತ್ತು ಇತರ ಜಿಲ್ಲೆಗಳಲ್ಲಿ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣಕ್ಕೆ 11ಇ ನಕ್ಷೆ ತಯಾರಿಸುವಂತಿಲ್ಲ ಮತ್ತು ವಿತರಿಸುವಂತಿಲ್ಲ.
* ಈಗಾಗಲೇ ಅಸ್ತಿತ್ವದಲ್ಲಿರುವ ಸರ್ವೆ ನಂಬರ್ ಅಥವಾ ಪಹಣಿಗಳು ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಅಂತಹ ಸರ್ವೆ ನಂಬರ್ ಅಥವಾ ಪಹಣಿಗಳು ಹಾಗೆಯೇ ಮುಂದುವರೆಯುತ್ತವೆ. ಅವುಗಳನ್ನು ಸಂಪೂರ್ಣವಾಗಿ ಮಾನ್ಯ ಮಾಡಲಾಗುತ್ತದೆ.
* ಪಿತ್ರಾರ್ಜಿತ ಅಥವಾ ಆನುವಂಶಿಕವಾಗಿ ಬಂದ ಹಕ್ಕುಗಳ ಮೇಲೆ ಉಲ್ಲೇಖಿಸಿದ ವಿಸ್ತೀರ್ಣಕ್ಕಿಂತ
ಕಡಿಮೆ ಇದ್ದರೂ ಅವುಗಳ ಹೊಸ ಪಹಣಿ ರಚಿಸಬಹುದು ಮತ್ತು ಪೋಡಿ ಮಾಡಬಹುದು.
* ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿರುವ ಮಾಲೀಕರ ಹಕ್ಕುಗಳ ಪ್ರಕಾರ ಪೋಡಿಯನ್ನು ಮೇಲೆ ಉಲ್ಲೇಖಿಸಿದಕ್ಕಿಂತ ಕನಿಷ್ಠ ವಿಸ್ತೀರ್ಣ ಪ್ರಮಾಣದಲ್ಲಿದ್ದರೆ ಅದರಂತೆ ಹೊಸ ಪಹಣಿ ರಚಿಸಬಹುದು.