ಕಾರ್ಕಳ: ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಇದರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ರವೀಂದ್ರ ಶೆಟ್ಟಿ ಬಜಗೋಳಿ ಅವರಿಗೆ ಬಜಗೋಳಿ ದಿಡಿಂಬಿರಿ ಶ್ರೀ ಗಣಪತಿ ಸಭಾಭವನದಲ್ಲಿ ಹುಟ್ಟೂರ ಅಭಿನಂದನಾ ಸಮಾರಂಭ ನಡೆಯಿತು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ರವೀಂದ್ರ ಶೆಟ್ಟಿ ಅವರನ್ನು ಊರವರ ಪರವಾಗಿ ಅಭಿನಂದಿಸಿದರು. ಬಳಿಕ ಮಾತನಾಡಿ, ರವೀಂದ್ರ ಶೆಟ್ಟಿ ಹತ್ತಾರು ರೀತಿಯ ಸವಾಲು, ಎಡರು ತೊಡರುಗಳನ್ನು ಮೀರಿ ಬೆಳೆದ ವ್ಯಕ್ತಿ. ಇದೀಗ ಅವರು ಸ್ಟೋನ್ ಕ್ರಷರ್ ಸಂಘದ ರಾಜ್ಯಾಧ್ಯಕ್ಷರಾಗಿರುವುದು ಕಾರ್ಕಳಕ್ಕೆ ಹೆಮ್ಮೆಯ ಸಂಗತಿ ಎಂದರು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿರುವ ರವೀಂದ್ರ ಶೆಟ್ಟಿ ಅವರು, ಎಲ್ಲ ಕ್ರಷರ್ ಮಾಲೀಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಪಣೆ ನೀಡಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಂದ್ರ ಶೆಟ್ಟಿ ಅವರು, ನಮ್ಮೂರಿನ ಜನತೆ ತೋರುವ ಪ್ರೀತಿಗೆ ಅಭಾರಿಯಾಗಿದ್ದೇನೆ. ಆರ್‌ಎಸ್‌ಎಸ್, ಸಚಿವ ಸುನಿಲ್ ಕುಮಾರ್, ಡಾ. ಮೋಹನ್ ಆಳ್ವಾರ ಪ್ರಭಾವದಿಂದಾಗಿ ನಾನಿಂದು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಹುಟ್ಟೂರಿನ ಸನ್ಮಾನ ನನ್ನನ್ನು ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಪಣೆ ನೀಡಿದ್ದು, ವಾರದಲ್ಲಿ ಒಂದು ದಿನ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗಾಗಿ ಸಮಯ ನಿಗದಿಗೊಳಿಸುತ್ತೇನೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಮುಡಾರು ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ನಲ್ಲೂರು ಪಂಚಾಯತ್ ಅಧ್ಯಕ್ಷೆ ಕವಿತಾ, ಜಯವರ್ಮ ಹೆಗ್ಡೆ ಸುಮ್ಮಗುತ್ತು, ಡಾ. ವೆಂಕಟಗಿರಿ ರಾವ್, ಗಣೇಶ್ ಕಾಮತ್, ಮಹಾವೀರ ಜೈನ್, ಉಮೇಶ್ ರಾವ್, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಭಾಸ್ಕರ್ ವಿ., ಉದ್ಯಮಿ ಹರೀಶ್ ಸಾಲ್ಯಾನ್, ಪ್ರಸಾದ್ ಸಿ. ಆಚಾರ್ಯ, ಉದಯ ಸಾಲ್ಯಾನ್, ಸುಧಾಕರ ಸಾಲಿಯಾನ್, ಶ್ಯಾಮ ಎನ್. ಶೆಟ್ಟಿ ಉಪಸ್ಥಿತರಿದ್ದರು. ನಲ್ಲೂರು ಶಾಲಾ ಮುಖ್ಯ ಶಿಕ್ಷಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ್ ನಾರಾವಿ, ವಸಂತ ಶೆಟ್ಟಿ, ಸಂತೋಷ್, ದೇವದಾಸ್ ಪ್ರಭು, ಸಂತೋಷ್ ಜೈನ್ ಹಾಗೂ ಬಳಗದವರು ಸಹಕರಿಸಿದರು.