ಕಾಪು: ತಾಲೂಕಿನ ಬೆಳ್ಳಂಪಲ್ಲಿಯಲ್ಲಿರುವ ಜೈ ಹಿಂದ್ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 55 ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಗೆ ಖಾಯಂ ಶಿಕ್ಷಕರನ್ನು ನೀಡಬೇಕು ಎಂದು ಆಗ್ರಹಿಸಿ ಗುರುವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
1947 ರಲ್ಲಿ ಪ್ರಾರಂಭವಾದಾಗಿನಿಂದ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಲಾಗಿಲ್ಲ ಎಂದು ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಹೇಳಿದರು. ಕಳೆದ ಆರು ವರ್ಷಗಳಿಂದ, ತರಗತಿಗಳನ್ನು ನಡೆಸಲು ಹತ್ತಿರದ ಅನುದಾನಿತ ಶಾಲೆಯ ಶಿಕ್ಷಕರನ್ನು ವಾರಕೊಮ್ಮೆ ನಿಯೋಜಿಸಲಾಗುತ್ತಿದೆ. ಹದಿನೈದು ದಿನಗಳ ಹಿಂದೆ ಶಾಲೆಗೆ ನಿಯೋಜನೆಗೊಂಡಿದ್ದ ಹಾವಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರನ್ನು ಬದಲಾವಣೆ ಮಾಡಿ ವಾರಕ್ಕೊಮ್ಮೆ ತರಗತಿ ನಡೆಸಲು ಎಬಿಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ಶಿಕ್ಷಕರು ತರಗತಿಗಳನ್ನು ತೆಗೆದುಕೊಳ್ಳಲು ವಿಫಲರಾಗಿದ್ದಾರೆ. 55 ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದರು.
ಅಧ್ಯಯನ ಪ್ರಮಾಣಪತ್ರ ನೀಡಲು ಕೂಡಾ ಶಾಲೆಯಲ್ಲಿ ಯಾರೂ ಇಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಖಾಯಂ ಶಿಕ್ಷಕರನ್ನು ನೇಮಿಸಲು ಸರಕಾರ ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿ ಶಾಲೆಯ ಅಕ್ಕಪಕ್ಕದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.