ಉಡುಪಿ: ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ಮತ್ತು ನಿಯಮಗಳ ಅನುಸಾರ ನಡೆಸಲಾಗುತ್ತಿದೆ. ಹೀಗಾಗಿ ಕೆಲಸ ಕೊಡಿಸುತ್ತೇವೆಂದು ಬರುವ ಮಧ್ಯವರ್ತಿಗಳ ಆಮಿಷಕ್ಕೆ ಯಾರು ಬಲಿಯಾಗಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಉಡುಪಿಯಲ್ಲಿ ನೂತನ ಪೊಲೀಸ್ ವಸತಿ ಸಮುಚ್ಛಯವನ್ನು ಇಂದು ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ 947 ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ 4000 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ ನಡೆಯುತ್ತಿವೆ. ನೇಮಕಾತಿ ಪ್ರಕ್ರಿಯೆಗಳ ಭಾಗವಾಗಿ ನಡೆಯುತ್ತಿರುವ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳು, ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ. ಇದರಲ್ಲಿ ದಾಖಲಾಗುವ ಅಂಕಗಳೇ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹುದ್ದೆ ಕೊಡಿಸುವುದಾಗಿ ಯಾರಾದರೂ ಆಮಿಷ ಒಡ್ಡಿದರೆ, ಅಭ್ಯರ್ಥಿಗಳು ಅಥವಾ ಅವರ ಪೋಷಕರು ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದೂ ಸಚಿವರು ಮನವಿ ಮಾಡಿದ್ದಾರೆ.