ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್?: ತಗ್ಗಲಿದೆಯೇ ತೈಲ ಬೆಲೆ?

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಗ್ಗಿಸಬೇಕು ಎಂದಾದರೆ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಸೂಕ್ತ ಎಂಬ ಅಭಿಪ್ರಾಯ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‌ಟಿ ಮಂಡಳಿಯು ಶುಕ್ರವಾರದ ಸಭೆಯಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪೆಟ್ರೋಲ್, ಡಿಸೇಲ್ ಜಿಎಸ್ ಟಿ ವ್ಯಾಪ್ತಿಗೆ ಬಂದರೆ ಆರ್ಥಿಕ ತಜ್ಞರ ಪ್ರಕಾರ ಪೆಟ್ರೋಲ್‌ ದರ 75 ರೂ.ಗಳಿಗೆ ಇಳಿಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಜಿಎಸ್‌ಟಿ ಮಂಡಳಿಗೆ ಕೇರಳ ಹೈಕೋರ್ಟ್‌ ಜೂನ್‌ನಲ್ಲಿ ಸೂಚಿಸಿತ್ತು. ಕೋರ್ಟ್‌ ಈ ರೀತಿ ಸೂಚನೆ ನೀಡಿರುವ ಕಾರಣ, ಈ ವಿಚಾರವನ್ನು ಮಂಡಳಿಯ ಮುಂದೆ ಚರ್ಚೆಗೆ ಇರಿಸಲಾಗುವುದು ಎಂದು ಮೂಲಗಳು ಹೇಳಿವೆ.
ಜಿಎಸ್‌ಟಿಯು ಬಳಕೆ ಆಧಾರಿತ ತೆರಿಗೆ ವ್ಯವಸ್ಥೆ. ಈ ವ್ಯವಸ್ಥೆಯ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಈ ಉತ್ಪನ್ನಗಳು ಮಾರಾಟ ಹೆಚ್ಚಾಗಿ ಆಗುವ ರಾಜ್ಯಗಳಿಗೆ ಹೆಚ್ಚಿನ ಆದಾಯ ಸಿಗುತ್ತದೆ.

ಆದರೆ, ಇವುಗಳನ್ನು ಉತ್ಪಾದಿಸು ರಾಜ್ಯಗಳಿಗೆ ಹೆಚ್ಚಿನ ಆದಾಯ ಸಿಗುವುದಿಲ್ಲ. ಉದಾಹರಣೆಗೆ, ಹೆಚ್ಚಿನ ಜನಸಂಖ್ಯೆ ಇರುವ, ಬಳಕೆಯೂ ಹೆಚ್ಚಿಗೆ ಇರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಗುಜರಾತ್‌ನಂತಹ ರಾಜ್ಯಗಳಿಗಿಂತ ಹೆಚ್ಚಿನ ಆದಾಯ ಸಂಗ್ರಹಿಸುತ್ತವೆ.