ಪೆರ್ಡೂರು: ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

ಪೆರ್ಡೂರು ಗ್ರಾಮದ ಪಾಡಿಗಾರು ನಿವಾಸಿ ರಾಘವೇಂದ್ರ (36) ಮತ್ತು ಕುಂಜದಕಟ್ಟೆ ನಿವಾಸಿ ಸುಧೀಂದ್ರ ಶೆಟ್ಟಿ ಯಾನೆ ಬಾಬು (36) ಬಂಧಿತ ಆರೋಪಿಗಳು.

ಈ‌ ಇಬ್ಬರು ಫೆ.17 ರಂದು ರಾತ್ರಿ ಸುಮಾರು 10:30ಕ್ಕೆ ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ.

ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.