ಪಡುಬಿದ್ರಿ: ಹಾರೆ ಏಟಿನಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾಪು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಬುಧವಾರ ನಡೆದಿದೆ.
ನಡ್ಸಾಲು ಗ್ರಾಮದ ಕಂಚಿನಡ್ಕ ರಾಘವೇಂದ್ರ ಮಠದ ಬಳಿ ನಿವಾಸಿ ಸುಶೀಲ(60) ಮೃತಪಟ್ಟ ಮಹಿಳೆ. ಇವರು ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದರು.
ಇವರು ಪ್ರತಿದಿನ ಮನೆಯ ವಠಾರದಲ್ಲಿ ವಾಕಿಂಗ್ ಮಾಡುತ್ತಿದ್ದು, ಎಂದಿನಂತೆ 2021ರ ಜೂನ್ 30ರಂದು ಬೆಳಿಗ್ಗೆ ವಾಕಿಂಗ್ ತೆರಳಿದ್ದರು. ಅಂದು ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ಆನಂದ ಎಂಬವರ ಮನೆಯ ಅಂಗಳದಲ್ಲಿ ಹೋಗುತ್ತಿದ್ದ ಸುಶೀಲಾ ಅವರಿಗೆ ಆನಂದ ಅವರ ಮಗ ಮಣಿ ಯಾನೆ ಮಣಿಕಂಠ ಎಂಬಾತನು ಹಾರೆಯಿಂದ ತಲೆಗೆ ಬಲವಾಗಿ ಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ಸುಶೀಲಾ ಅವರಿಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿಯೇ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದರು. ಆದರೆ ಡಿ. 22ರಂದು ಬೆಳಿಗ್ಗೆ ಹಠಾತ್ ಆಗಿ ಮೃತಪಟ್ಟಿದ್ದಾರೆ.
ಸುಶೀಲಾ ತಲೆಗೆ ಹಲ್ಲೆಯಿಂದ ಉಂಟಾದ ಗಾಯದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.