ನವದೆಹಲಿ: ಕೋವಿಡ್–19 ಸೋಂಕಿನ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ‘ ಉಚಿತ ಪಡಿತರ ನೀಡುವ ಯೋಜನೆಯನ್ನು ದೇಶದಾದ್ಯಂತ ಜುಲೈ 31ರವರೆಗೆ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಮತ್ತಿತರ ಸೌಲಭ್ಯಗಳನ್ನು ನೀಡಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠವು ಈ ನಿರ್ದೇಶನಗಳನ್ನು ನೀಡಿದೆ.
ಬಡ ವರ್ಗದವರ ಕಲ್ಯಾಣಕ್ಕಾಗಿ ರೂಪಿಸಿರುವ ‘ಒಂದು ದೇಶ, ಒಂದು ಪಡಿತರ ಚೀಟಿ‘ ಯೋಜನೆಯಡಿ, ವಲಸೆ ಕಾರ್ಮಿಕರು ಕೆಲಸಕ್ಕಾಗಿ ಹೊರ ರಾಜ್ಯಗಳಿಗೆ ಹೋಗಿರುವ ಸಂದರ್ಭದಲ್ಲಿ ಕೆಲಸ ಮಾಡುವ ಸ್ಥಳದಲ್ಲೇ ಉಚಿತ ಪಡಿತರ ಪಡೆಯಬಹುದು. ಇಲ್ಲಿ ಪಡಿತರ ಚೀಟಿ ನೋಂದಣಿ ಮಾಡಿಸದಿದ್ದರೂ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಪೀಠ ತಿಳಿಸಿದೆ.