ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ನೂತನ ಸಹಕಾರ ಸಚಿವಾಲಯ ರಚನೆ ಮಾಡುವ ನಿರ್ಧಾರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ದೇಶದ ಸುಮಾರು 35 ಕೋಟಿ ನಾಗರಿಕರು ಸಹಕಾರಿ ಸಂಘಗಳ ಸದಸ್ಯರಾಗಿ ಸಹಕಾರಿ ಕ್ಷೇತ್ರದ ಮೂಲಕ ತಮ್ಮ ಆರ್ಥಿಕ ವ್ಯವಹಾರಗಳನ್ನು ನಡೆಸುತ್ತಿದ್ದು, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿತುಂಬುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಈ ಐತಿಹಾಸಿಕ ನಿರ್ಧಾರ ಅಭಿನಂದನೀಯ ಎಂದಿದ್ದಾರೆ.
ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಕೇಂದ್ರ ಸರಕಾರದ ಈ ನೂತನ ಸಹಕಾರ ಸಚಿವಾಲಯ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸಿ `ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯವನ್ನು ಸಾಕಾರಗೊಳಿಸುವಲ್ಲಿ ಸಹಕಾರಿಯಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಸಹಕಾರಿ ಕ್ಷೇತ್ರದ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.