ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ: ಭೂಕುಸಿತ ಸಂಭವಿಸುವ ಭೀತಿ.?; ಆತಂಕದಲ್ಲಿ ಸಾರ್ವಜನಿಕರು..!

ಉಡುಪಿ: ಕವಿ ಮುದ್ದಣ ಮಾರ್ಗದಲ್ಲಿ ನಗರಸಭೆ ಕಚೇರಿ ಸಮೀಪ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿಯ ಕಾರಣದಿಂದ ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಲಾಗಿದ್ದು, ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಸುಮಾರು ಅರವತ್ತು ಅಡಿ ಆಳದ ಗುಂಡಿ ನಿರ್ಮಾಣ ಮಾಡಲಾಗಿದೆ. ಇದೀಗ ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ನೀರಿನ ಮಟ್ಟವು ಐವತ್ತು ಅಡಿಯ ಆಳದವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಗುಂಡಿಯ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು ಯಾವುದೇ ರಕ್ಷಣಾ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಜೇಡಿ ಮಣ್ಣು ಮೆದುವಾಗಿರುವುದರಿಂದ ಇಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ಗುಂಡಿಯ ಅಂಚಿನ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳು ಇವೆ. ಅಕಸ್ಮಾತ್ ಅತಿಯಾಗಿ ಮಳೆ ಸುರಿದು ನೀರಿನ ಮಟ್ಟ ಏರಿಕೆಯಾದರೆ ಭೂಕುಸಿತ ಸಂಭವಿಸಬಹುದು. ಅಕ್ಕ ಪಕ್ಕದ ಕಟ್ಟಡಗಳು ಉರುಳಿ ಬಿದ್ದು ದೊಡ್ಡ ಮಟ್ಟದ ದುರಂತ ಸಂಭವಿಸಬಹುದಾಗಿದೆ.

ಸ್ಥಳದ ಸುತ್ತಲು ಎತ್ತರದವರೆಗೆ ತಗಡುಸಿಟಿನ ಬೇಲಿ ಹಾಕಿರುವುದರಿಂದ, ಇಲ್ಲಿಯ ಸಮಸ್ಯೆ ಅಧಿಕಾರಿಗಳ ಸಾರ್ವಜನಿಕರ ಅರಿವಿಗೆ ಬಾರದೆ ಅಜ್ಞಾತವಾಗಿದೆ. ಪರಿಸರದಲ್ಲಿ ಆತಂಕ ಮನೆಮಾಡಿದೆ. ತುರ್ತಾಗಿ ಜಿಲ್ಲಾಡಳಿತ, ನಗರಸಭೆ, ಅಪಾಯ ಆಹ್ವಾನಿಸುವ ಈ ಸ್ಥಳವನ್ನು, ಭೂ ವಿಜ್ಞಾನಿ- ಭೂಗರ್ಭ ಶಾಸ್ತ್ರಜ್ಞರ ಮೂಲಕ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.