ಮುನಿಯಾಲ್ ಆಯುರ್ವೇದ ಕಾಲೇಜು: ಪೋಷಣ್ ಮಾಸಾಚರಣೆ

ಉಡುಪಿ: ಮುನಿಯಾಲ್ ಆಯುರ್ವೇದ ಕಾಲೇಜು, ನಗರ ಸಭೆ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಉಡುಪಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೆಟ್ಟಿಬೆಟ್ಟು ಇವರ ಸಹಯೋಗದೊಂದಿಗೆ “ಪೋಷಣ್ ಅಭಿಯಾನ” ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಶೆಟ್ಟಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಆಯೋಜಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿಯ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ ಅವರು ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವನೆಯ ಪ್ರಾಮುಖ್ಯತೆಯನ್ನು ತಿಳಿಸುವುದರೊಂದಿಗೆ ಕೌಟುಂಬಿಕ ದೌರ್ಜನ್ಯದಡಿ ಕಾನೂನು ಸೇವೆಗಳ ಮಹತ್ವದ ಕುರಿತು ಮಾಹಿತಿ ನೀಡಿ ಅಗತ್ಯವಿರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಮುನಿಯಾಲು ಆಯುರ್ವೇದ ಆಸ್ಪತ್ರೆಯ ಡಾ. ನಿವೇದಿತಾ ಮಾತನಾಡಿ, ಆರೋಗ್ಯ ವೃದ್ಧಿಗಾಗಿ ಸಾಂಪ್ರದಾಯಿಕ ಆಹಾರಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಹದಿಹರೆಯದ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ.ನರಸಿಂಹ ನಾಯಕ್ ಮಾತನಾಡಿ, ಪೋಷಣ್ ಅಭಿಯಾನದಡಿ ನಡೆಯುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಎಲ್ಲರೂ ಇಂತಹ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡುವುದರೊಂದಿಗೆ ಪ್ರಮುಖವಾಗಿ ಗರ್ಭಿಣಿ ಬಾಣಂತಿಯರು ಕೋವಿಡ್ ಲಸಿಕೆ ಪಡೆದುಕೊಂಡು ಮುಂದೆ ಆಗುವಂತಹ ಅನಾಹುತವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಶೆಟ್ಟಿಬೆಟ್ಟು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪೋಷಣ್ ಅಭಿಯಾನ ಯೋಜನೆಯ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭಿಣಿ, ಬಾಣಾಂತಿಯರು, ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶೆಟ್ಟಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷೀಶ ಅವರು ಸ್ವಾಗತಿಸಿ ಮೇಲ್ವಿಚಾರಕಿ ಪೂರ್ಣಿಮಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.