ಉಡುಪಿ: ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮಿ ಮಂದಿರ ಮಠದ ಆಶ್ರಯದಲ್ಲಿ, ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ, ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್, ಉಡುಪಿ ವಲಯ ಇದರ ಸಹಯೋಗದಲ್ಲಿ ಮಿನಿ ಉದ್ಯೋಗ ಮೇಳವು ಜ. 29 ನೂತನವಾಗಿ ಉದ್ಘಾಟನೆಗೊಂಡ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಕಾರ್ಯಾಧ್ಯಕ್ಷ ದಿವಾಕರ್ ಶೆಟ್ಟಿ ತೋಟದಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅಥಿತಿಗಳಾಗಿ ನಿತ್ಯಾನಂದ ಸ್ವಾಮಿ ಮಂದಿರದ ಕಾರ್ಯದರ್ಶಿ ಈಶ್ವರ್ ಚಿಟ್ಪಾಡಿ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ನ ಉಡುಪಿ ವಲಯಾಧ್ಯಕ್ಷ ಜನಾರ್ಧನ್ ಭಟ್ ಕೊಡವೂರು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾವಲಂಬಿ ಭಾರತ ಜಿಲ್ಲಾಸಮನ್ವಯಕಾರ ವಿಜಯ್ ಕೊಡವೂರು, ನಮ್ಮ ದೇಶದಲ್ಲಿ ಯುವಕರಲ್ಲಿ ದುಷ್ಛಟಗಳು ತಾಂಡವವಾಡುತ್ತಿದೆ. ಯುವಕ ಯುವತಿಯರಿಗೆ ಉದ್ಯೋಗ ಇಲ್ಲದಿರುವುದು ಒಂದು ಕಾರಣ. ಇಂತಹ ನಿರುದ್ಯೋಗಿ ಯುವತಿ ಯವಕರಿಗೆ ಸರಿಯಾದ ಉದ್ಯೋಗ ನೀಡಿದಲ್ಲಿ ಅವರು ಸಮಾಜ ಕಂಟಕರಾಗಲು ಸಾಧ್ಯವಿಲ್ಲ. ಕೊಡವೂರು ವಾರ್ಡ್ ಸಮಿತಿ ವತಿಯಿಂದ ವಾರ್ಡ್ ನಲ್ಲಿ ಸರ್ವೆ ಮಾಡಿ ನಿರುದ್ಯೋಗಿಗಳ ಬಯೋಡೇಟಾ ಪಡೆದು ಅವರಿಗೆ ಉದ್ಯೋಗ ನೀಡುವ ಕಾರ್ಯ ನಡೆಯುತ್ತಿದ್ದು ಇದುವರೆಗೆ 73 ಜನರಿಗೆ ಉದ್ಯೋಗ ನೀಡಲಾಗಿದೆ. ಇದರ ಮುಂದುವರಿಕೆಯಾಗಿ ಬೇರೆ ಬೇರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉದ್ಯೋಗ ದೊರೆತ ಯುವಕ ಯುವತಿಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶವನ್ನು ಬಲಿಷ್ಠಗೊಳಿಸಿ ಸುಭದ್ರಗೊಳಿಸುತ್ತಾನೆ ಎಂದರು.
ಉಡುಪಿಯ ರಿಲಯನ್ಸ್ ಸ್ಮಾರ್ಟ್ ಬಜಾರ್ ಮಳಿಗೆ, ಹೀರೋ ಶಕ್ತಿ ಮೋಟಾರ್ಸ್ , ಎಸ್. ವಿ.ಎಸ್. ಅಸೋಸಿಯೇಟ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳು ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದವು.
ಸುಮಾರು 20 ಮಂದಿ ಉದ್ಯೋಗಾಕಾಂಕ್ಷಿಗಳು ಸಂದರ್ಶನ ನೀಡಿದರು.
ಎನ್.ಪಿ.ಯು.ಎಸ್.ಟಿ.ಪಿ.ಎ ಸಂಸ್ಥಾಪಕ ಮಿಥೇಶ್ ಕುಮಾರ್ ಮೂಡುಕೋಣಾಜೆ, ಕೊಡವೂರು ಅಯ್ಯಪ್ಪ ಸ್ವಮಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಮೆಂಡನ್ ಉಪಸ್ತಿತರಿದ್ದರು.
ಶರೋನ್ ಶೆಟ್ಟಿ ಐಕಳ ನಿರೂಪಿಸಿದರು.