ಶ್ರೀನಗರ, ನ.15: ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಒಂಭತ್ತು ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಮೂವರು ನಾಗರಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡವರನ್ನು ಶ್ರೀನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಪೊಲೀಸರು, ವಿಧಿವಿಜ್ಞಾನ ಸಿಬ್ಬಂದಿ ಸೇರಿದ್ದಾರೆ ಎಂದು ಪೊಲೀಸ್ ಮೂಲವನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಫೋಟದ ತೀವ್ರತೆಯಿಂದ ಠಾಣೆ ಕಟ್ಟಡಕ್ಕೂ ಹಾನಿಯಾಗಿದೆ. ಸ್ಥಳದಲ್ಲೇ ಏಳು ಮೃತದೇಹಗಳು ಪತ್ತೆಯಾಗಿದ್ದು, ಮತ್ತೆರಡು ಮೃತದೇಹಗಳನ್ನೂ ನಿಯಂತ್ರಣ ಕೊಠಡಿಗೆ ತೆಗೆದುಕೊಂಡು ಹೋಗಲಾಗಿದೆ. ಮೃತರ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ.ಇತ್ತೀಚೆಗೆ ಹರಿಯಾಣದ ಫರಿದಾಬಾದ್ ನಲ್ಲಿ ಪತ್ತೆಯಾದ ಮತ್ತು ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳನ್ನು ನೌಗಮ್ ಠಾಣೆಯಲ್ಲಿ ಪರೀಕ್ಷಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಭದ್ರತಾ ಪಡೆಗಳು ಕೆಲವು ವಾರಗಳ ಹಿಂದೆ ಭೇದಿಸಿದ್ದ ‘ವೈಟ್-ಕಾಲರ್ ಭಯೋತ್ಪಾದಕ ಮಾದರಿ’ಗೆ ಸಂಬಂಧಿಸಿದಂತೆ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಸೇರಿದಂತೆ 360 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ವೈದ್ಯ ಮುಝಮ್ಮಿಲ್ ಗನೈ ಮನೆಯಿಂದ ವಶಪಡಿಸಿಕೊಂಡ ಕೆಲವು ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿತ್ತು. ಆದರೆ ಹೆಚ್ಚಿನ ವಸ್ತುಗಳನ್ನು ನೌಗಮ್ ನ ಪೊಲೀಸ್ ಠಾಣೆಯಲ್ಲಿ ಇಡಲಾಗಿದ್ದು, ಮಾದರಿಯ ಪರೀಕ್ಷೆ ನಡೆಸುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಮಿಸುವ ಮುನ್ನವೇ ಸ್ಫೋಟ ಸಂಭವಿಸಿರುವುದರಿಂದ ಸ್ಪೋಟದ ತೀವ್ರತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.


















