ಉಡುಪಿ: ಲಕ್ಷದ್ವೀಪದ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು ಚಂಡಮಾರುತದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಭಾರಿ ಗಾಳಿಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ.
ಉಡುಪಿ ಜಿಲ್ಲೆಯ ಮಲ್ಪೆ ಸರ್ವ ಋತು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟುಗಳು ವಾಪಸ್ ಆಗಿವೆ. ರಾಜ್ಯದ ಗಡಿ ದಾಟಿ ಗೋವಾ, ಮಹಾರಾಷ್ಟ್ರ ಗುಜರಾತ್ ಬಾರ್ಡರ್ ನಲ್ಲಿ ಇರುವ ಬೋಟ್ ಗಳಿಗೆ ಹತ್ತಿರದ ಬಂದರುಗಳನ್ನು ಆಶ್ರಯಿಸುವಂತೆ ಸೂಚನೆ ನೀಡಲಾಗಿದೆ.ಸರ್ವಋತು ಬಂದರು ಎನಿಸಿರುವ ಮಲ್ಪೆಯಲ್ಲೀಗ ಬಹುತೇಕ ಮೀನುಗಾರಿಕಾ ಬೋಟ್ ಗಳು ಲಂಗರು ಹಾಕಿವೆ.ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಗಳು ದೂರದ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ಲಂಗರುಹಾಕಿವೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಮತ್ಸ್ಯಬೇಟೆ ಬಹುತೇಕ ಸ್ಥಗಿತಗೊಂಡಿದೆ.


















