ಉಡುಪಿ: ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಂಬಂಧಿಸಿದಂತೆ ‘ಸರಳ ಹಾಗೂ ಸಜ್ಜನರಾದವರು 13 ಸೆಂಟ್ಸ್ ಜಾಗದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಗುಡಿಸಲು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಈ ಆರೋಪಕ್ಕೆ ಇದೀಗ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ನಾನು ಬ್ಯಾಂಕ್ ಸಾಲ ಹಾಗೂ ಸ್ವಂತ ದುಡಿಮೆಯಿಂದ ಬ್ರಹ್ಮಾವರ ತಾಲ್ಲೂಕಿನ ಗಿಳಿಯಾರು ಗ್ರಾಮದಲ್ಲಿರುವ 13 ಸೆಂಟ್ಸ್ ಜಾಗದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ, ಕೆಲವರು ₹ 6 ಕೋಟಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿರುವುದಾಗಿ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕೋಟ ಅವರು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ.
3 ಬಾರಿ ವಿಧಾನ ಪರಿಷತ್ ಸದಸ್ಯ, 2 ಬಾರಿ ಸಂಪುಟ ದರ್ಜೆ ಸಚಿವ ಹಾಗೂ 1 ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಪ್ರತಿವರ್ಷ ಆಸ್ತಿಯ ವಿವರಗಳನ್ನು ಲೋಕಾಯುಕ್ತರಿಗೆ ಸಲ್ಲಿಸುತ್ತೇನೆ. ಆದರೂ, ಈಗ ನಿರ್ಮಾಣ ಮಾಡುತ್ತಿರುವ ಮನೆಯ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡುತ್ತಿರುವುದು ತುಂಬಾ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.
ನಾನು ಕಾನೂನು ಉಲ್ಲಂಘಿಸಿ ಮನೆ ಕಟ್ಟುತ್ತಿಲ್ಲ. ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ಮನೆ ಕಟ್ಟಿಸುತ್ತಿದ್ದೇನೆ. ಇದಕ್ಕಾಗಿ 2 ವರ್ಷಗಳ ಹಿಂದೆ ಅಪೆಕ್ಸ್ ಬ್ಯಾಂಕ್‌ನಿಂದ ₹ 35 ಲಕ್ಷ ಸಾಲ ಪಡೆಯಲಾಗಿದ್ದು, ಮತ್ತೆ ₹ 40 ಲಕ್ಷ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಮಹತ್ತರ ವಿದ್ಯಮಾನಗಳು ನಡೆಯುತ್ತಿರುವ ಸಂದರ್ಭದಲ್ಲಿ, ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋಟ ಆಗ್ರಹಿಸಿದ್ದಾರೆ.