ಬೆಂಗಳೂರು: ಕೊರೊನಾ ಹೆಚ್ಚಳ ಹಾಗೂ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಕನ್ನಡದ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ 8 ನಾಳೆ (ಮೇ 9)ಯಿಂದ ಮುಕ್ತಾಯಗೊಳ್ಳಲಿದೆ ಎಂದು ಕಲರ್ಸ್ ಚಾನೆಲ್ ನ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ.
ಈ ಬಗ್ಗೆ ಸ್ವತಃ ಗುಂಡ್ಕಲ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಸ್ಪರ್ಧಿಗಳನ್ನು ಹೊರಗೆ ಕರೆತಂದು ಶೋ ರದ್ದು ಪಡಿಸಿರುವ ಮಾಹಿತಿ ನೀಡಲಾಗುವುದು. ಹಾಗೆ ಅವರನ್ನು ಸಕಲ ಭದ್ರತೆಯೊಂದಿಗೆ ಮನೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣದಿಂದ 71 ದಿನಗಳ ಬಿಗ್ಬಾಸ್ ಸೀಸನ್ 8 ಅನ್ನು ಮೇ 9ಕ್ಕೆ ರದ್ದುಪಡಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಬಿಗ್ಬಾಸ್ ಕನ್ನಡ ಶೋ ಅರ್ಧಕ್ಕೆ ನಿಲುಗಡೆಯಾಗಿದೆ.
ಬಿಗ್ಬಾಸ್ ಸೀಸನ್ 8 ಶುರುವಾದ ದಿನದಿಂದಲೂ ಬಹಳ ಅಡೆ-ತಡೆ ಉಂಟಾಗಿತ್ತು. ಕೊರೊನಾ ಬಂದು ಎಲ್ಲವೂ ಸ್ಥಗಿತವಾದ ಕಾರಣ ಈ ಬಾರಿ ಬಿಗ್ಬಾಸ್ ನಡೆಯುತ್ತೆ ಅನ್ನೋ ವಿಶ್ವಾಸವೂ ಇರಲಿಲ್ಲ. ಆದರೆ ಬಿಗ್ಬಾಸ್ ಸೂತ್ರಧಾರ ಪರಮೇಶ್ವರ್ ಗುಂಡ್ಕಲ್ ಅದನ್ನು ಸುಳ್ಳಾಗಿಸಿದ್ದರು. ಎಲ್ಲ ಅಡೆತಡೆಗಳ ನಡುವೆಯೂ ಶೋ ನಡೆಸಿ ಯಶಸ್ವಿಯಾಗಿದ್ದರು. ಆದರೆ ಇದೀಗ ಸೀಸನ್ 8ನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
“ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ.
ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ, ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.
ಸದ್ಯ ಬಿಗ್ಬಾಸ್ ಬಗೆಗಿನ ತಳಮಳಕ್ಕೆ ತೆರೆಬಿದ್ದಿದ್ದು, ನಾಳೆಯಿಂದ ಬಿಗ್ಬಾಸ್ ಮನೆ ಖಾಲಿಯಾಗಿರಲಿದೆ. ಲಾಕ್ಡೌನ್ ಕಾರಣ ತೆಗೆದುಕೊಂಡ ಈ ನಿರ್ಧಾರದಿಂದ ಅದೆಷ್ಟೋ ಜನರಿಗೆ ನೋವಾಗಿದ್ದರೂ ಕೂಡ, ಈ ನಿರ್ಧಾರವನ್ನ ಖುಷಿಯಿಂದಲೇ ಸ್ವೀಕರಿಸಬೇಕು ಎಂದಿದ್ದಾರೆ.