ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ ಕಾರು ಸುಟ್ಟು ಹಾಕಿದ ದುಷ್ಕರ್ಮಿಗಳು; ಪ್ರಕರಣ ದಾಖಲು

ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಯಾರೋ ದುಷ್ಕರ್ಮಿಗಳು ಸುಟ್ಟು ಹಾಕಿ, ದುಷ್ಕೃತ್ಯ ಮೆರೆದ ಘಟನೆ ಕಾವ್ರಾಡಿಯ ನೂರಾನಿ ಮಸೀದಿ ಸಮೀಪದ ರಸ್ತೆಯಲ್ಲಿ ಅ. 4ರಂದು ನಡೆದಿದೆ.

ಸ್ಥಳೀಯ ನಿವಾಸಿ ಶೇಖ್‌ ಮೊಹಮ್ಮದ್‌ ಗೌಸ್‌ ಅವರು 10 ದಿನಗಳ ಹಿಂದೆ ಈ ಕಾರನ್ನು 5 ಲಕ್ಷ ರೂ. ನೀಡಿ ಖರೀದಿಸಿದ್ದು, ಮನೆಗೆ ಹೋಗುವ ದಾರಿ ಸಮಸ್ಯೆಯಿರುವ ಕಾರಣ ಮಸೀದಿಯ ಎದುರಿನ ರಸ್ತೆ ಬದಿ ನಿಲ್ಲಿಸಿದ್ದರು. ಅ. 1ರಂದು ಅವರು ಕುಟುಂಬದೊಂದಿಗೆ ಹೈದರಾಬಾದಿಗೆ ಪ್ರವಾಸಕ್ಕೆ ತೆರಳಿದ್ದರು. ಅ. 4ರ ಬೆಳಗ್ಗೆ 5 ಗಂಟೆ ಸುಮಾರಿಗೆ ಅವರ ಸಹೋದರ ಶೇಖ್‌ ಅನ್ಸಾರ್‌ ಸಾಹೇಬ್‌ ಅವರು ಮಸೀದಿಗೆ ಬಂದಾಗ ಕಾರು ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ.

ದೂರು ದಾಖಲು:
ಅಣ್ಣ ಶೇಖ್‌ ಮೊಹಮ್ಮದ್‌ ಗೌಸ್‌ ಮತ್ತು ಅವರ ಮನೆಯವರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡುವ ಉದ್ದೇಶದಿಂದ ಇತ್ತೀಚೆಗೆ ದಾರಿಯ ಸಮಸ್ಯೆ ಉಂಟು ಮಾಡಿದ್ದ ಅಬ್ದುಲ್‌ ಅಜೀಜ್‌ ಮತ್ತು ಪುತ್ರ ಶೇಖ್‌ ಅಬ್ದುಲ್‌ ಫಯಾಜ್‌ ಅಥವಾ ಅಣ್ಣನ ಮಗಳು ನೇಹಾ ಬೇಗಂ ಎಂಬವರೊಂದಿಗೆ ಹಣದ ವ್ಯವಹಾರದಲ್ಲಿ ತಕರಾರು ಮಾಡಿದ್ದ ಕಂಡ್ಲೂರು ಮುಸೀನ್‌ ಹಾಗೂ ಸದಾಕತ್‌ ಅವರ ಮೇಲೆ ಸಂಶಯವಿರುವುದಾಗಿ ಶೇಖ್‌ ಅನ್ಸಾರ್‌ ಸಾಹೇಬ್‌ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.