ಕುಂದಾಪುರ: ಕೋಟೇಶ್ವರ ಸಮೀಪದ ಕಾಳಾವರ ಡ್ರೀಮ್ ಫೈನಾನ್ಸ್ ಮಾಲೀಕ ಅಜೇಂದ್ರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಫೈನಾನ್ಸ್ ವ್ಯವಹಾರದ ಪಾಲುದಾರ ಅನುಪ್ ಶೆಟ್ಟಿ ಹತ್ಯೆ ಮಾಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಅಜೇಂದ್ರ ಶೆಟ್ಟಿ ಅವರು ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ 2017ರಿಂದ ಈ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ನಿನ್ನೆ ರಾತ್ರಿ ಕೂಡ ಕಚೇರಿಯಲ್ಲಿ ಇಬ್ಬರು ಒಟ್ಟಿಗೆ ಹಣಕಾಸಿನ ವಿಚಾರದ ಕುರಿತು ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಅನುಪ್ ದ್ವೇಷದಿಂದ ಅಜೇಂದ್ರನ ಹತ್ಯೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿದ್ದು. ಬಳಿಕ ಅನುಪ್ ಶೆಟ್ಟಿ ತನ್ನ ಬುಲ್ಲೆಟ್ ಬೈಕ್ ಅನ್ನು ಫೈನಾನ್ಸ್ ಕಚೇರಿಯಲ್ಲೇ ಬಿಟ್ಟು, ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದಾನೆ. ಇದರಿಂದ ಆತನೇ ಕೊಲೆ ಮಾಡಿರಬಹುದು ಎಂಬ ಬಲವಾದ ಶಂಕೆ ಮೂಡಿದೆ. ಅಲ್ಲದೆ, ಕೊಲೆಯಾದ ಬಳಿಕ ಅನುಪ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು, ಆತ ಉತ್ತರಕನ್ನಡ ಮಾರ್ಗವಾಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಪ್ರತಿದಿನ 9 ಗಂಟೆಯೊಳಗೆ ಮನೆ ಸೇರುತ್ತಿದ್ದ ಅಜೇಂದ್ರ, ನಿನ್ನೆ ಮಾತ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಅಲ್ಲದೆ, ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಭಯಗೊಂಡ ಮನೆಯವರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಫೈನಾನ್ಸ್ ಕಚೇರಿಗೆ ಬಂದು ನೋಡಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.