ಕೋಟೇಶ್ವರ ದೇವಳ ಕೊಡಿ ಹಬ್ಬ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಕಲಾರಾಧಾನೆ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ. ಭಗವಂತನಿಗೆ ಅತೀ ಪ್ರಿಯವಾದದ್ದು ಕಲಾ ಸೇವೆ. ಅದು ನೃತ್ಯ, ಯಕ್ಷಗಾನ ಅಥವಾ ಇನ್ನಾವುದೇ ರೂಪದಲ್ಲಿ ಇರಬಹುದು. ಕಲಾ ಸೇವೆಯಿಂದ ಮನುಷ್ಯ ಅತೀ ಉನ್ನತ ಸ್ಥಾನವನ್ನು ಏರ ಬಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ( ಕೊಡಿ ಹಬ್ಬ) ಪ್ರಯುಕ್ತ ದೇವಸ್ಥಾನದ ಶಾಂತಾರಾಮ ರಂಗಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಗವಂತ ಶ್ರೀಕೃಷ್ಣನಿಗೆ ಯಕ್ಷಗಾನ, ಭಜನೆ, ನೃತ್ಯ ಮೊದಲಾದ ಕಲೆಗಳೆಂದರೆ ಅತಿ ಪ್ರಿಯವಾದದ್ದು, ಹೀಗಾಗಿ ಶ್ರೀ ಕೃಷ್ಣ ಮಠದಲ್ಲಿ ನಿತ್ಯ ಒಂದಲ್ಲ ಒಂದು ಪ್ರಕಾರದ ಕಲಾ ಸೇವೆ ನಡೆಯುತ್ತಿರುತ್ತದೆ. ರಾಜಾಂಗಣದಲ್ಲಿ ಚಿಟ್ಟಾಣಿ ಸಪ್ತಾಹ, ಧಾರೇಶ್ವರ ಅಷ್ಟಾಹ ಮೊದಲಾದ ಕಾರ್ಯಕ್ರಮಗಳನ್ನು ಪ್ರಾಯೋಜಿಸಿ ಕಲಾ ಸೇವೆ ನಡೆಸಲಾಗುತ್ತಿದೆ. ಅಲ್ಲದೆ ಯಕ್ಷಗಾನ, ಜಾನಪದ ಕ್ಷೇತ್ರದ ಕಲಾ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಕಲಾ ಸೇವೆಗೆ ಭಗವಂತ ಪ್ರಸನ್ನ ಅದೇನೇನೋ ಎಂಬಂತೆ ನನಗೆ ಕಲಾ ಸೇವೆ ಮಾಡಲು ಭಗವಂತ ಅನುಗ್ರಹಿಸಿದ್ದಾರೆ. ಭಗವಂತನ ಆರಾಧನೆ ನಮ್ಮ ಶ್ರೇಯೋನ್ನತಿಗೆ ಕಾರಣವಾಗುತ್ತದೆ ಎಂಬುದು ನನ್ನ ಮಾತಿನ ತಾತ್ಪರ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರಾಗಿಣಿ ದೇವಾಡಿಗ, ಶ್ರೀ ಕೋಟಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಮೊದಲಾದವರು ಉಪಸ್ತಿರಿದ್ದರು.

ಈ ಸಂದರ್ಭದಲ್ಲಿ ಕೋಟೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಿ. ಶ್ರೀನಿವಾಸ್ ರಾವ್ ಹಾಗೂ ರಥ ಶಿಲ್ಪಿ ಜಗನ್ನಾಥ ಆಚಾರ್ಯರವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.