ಕೊಡವೂರು: ಕೊಡವೂರು ವಾರ್ಡ್ ನ ಪಾಳೆಕಟ್ಟೆ, ಲಕ್ಷ್ಮೀನಗರ, ಗರ್ಡೆ ವಠಾರದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದ್ದು, ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಒನ್ಲೈನ್ ತರಗತಿಗಳಿಗೆ ಸಮಸ್ಯೆ ಆಗುತ್ತಿದೆ.
ಇದನ್ನು ಮನಗಂಡ ಸ್ಥಳೀಯ ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ಹಾಗೂ ಗೆಳೆಯರ ಬಳಗ ಗರ್ಡೆ ಲಕ್ಷ್ಮೀನಗರ ಇವರ ಸಹಕಾರದೊಂದಿಗೆ ನಗರಸಭಾ ಸದಸ್ಯ ವಿಜಯ ಕೊಡವೂರು ಅವರ ನೇತೃತ್ವದಲ್ಲಿ ರಿಲಯನ್ಸ್ ಜಿಯೋ ನೆಟ್ ವರ್ಕ್ ಕಂಪನಿಯ ವತಿಯಿಂದ ಲಕ್ಷ್ಮೀನಗರ ವಠಾರದಲ್ಲಿ ನೂತನ ಮೊಬೈಲ್ ಟವರ್ ಸ್ಥಾಪಿಸಲಾಯಿತು. ಅದರ ಉದ್ಘಾಟನಾ ಕಾರ್ಯಕ್ರಮ ಲಕ್ಷ್ಮೀ ಕಾಫಿ ವಠಾರದಲ್ಲಿ ನೆರವೇರಿತು.
ಜಿಯೊ ಕಂಪನಿಯ ಮ್ಯಾನೇಜರ್ ಸುಧೀರ್, ಟವರ್ ನಿರ್ಮಿಸಲು ಸ್ಥಳಾವಕಾಶ ನೀಡಿದ ಲಕ್ಷ್ಮೀ ಕಾಫಿ ಮಾಲೀಕ ಶಾಂತರಾಮ್, ಕೊಡವೂರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾತ್ ಕೊಡವೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಜಿಯೋ ಮ್ಯಾನೇಜರ್ ಸುಧೀರ್, ಸಂಘ ಸಂಸ್ಥೆ ಹಾಗು ನಗರಸಭಾ ಸದಸ್ಯ ವಿಜಯ ಕೊಡವೂರು ಅವರ ಊರಿನ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಹಾಗು ಇನ್ನು ಮುಂದೆಯೂ ಕೂಡ ಜನರಿಗೆ ಒಳ್ಳೆಯ ರೀತಿಯ ನೆಟ್ವರ್ಕ್ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮನವಿಗೆ ಸ್ಪಂದಿಸಿ ಟವರ್ ನಿರ್ಮಿಸಲು ಸಹಕರಿಸಿದ ಜಿಯೊ ಮ್ಯಾನೇಜರ್ ಸುಧೀರ್ ಅವರನ್ನು ಗೌರವಿಸಲಾಯಿತು.