ಉಡುಪಿ: ಪ್ರಸಕ್ತ ಐಪಿಎಲ್ ಟಿ20 ಟೂರ್ನಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಇನ್ನು ಕೆಲವೇ ಲೀಗ್ ಹಂತದ ಪಂದ್ಯಗಳು ಬಾಕಿ ಇವೆ.
ಈಗಾಗಲೇ ಡೆಲ್ಲಿ, ಚೆನ್ನೈ ಹಾಗೂ ಬೆಂಗಳೂರು ತಂಡಗಳು ಪ್ಲೇ ಆಫ್ ಹಂತಕ್ಕೆ ತಲುಪಿವೆ. ಸದ್ಯ ಪ್ಲೇ ಆಫ್ ಪ್ರವೇಶಿಸಲಿರುವ ನಾಲ್ಕನೇ ತಂಡದ ಸ್ಥಾನಕ್ಕಾಗಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಐದನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಈ ಎರಡೂ ತಂಡಗಳು ಸಹ ತಲಾ 12 ಅಂಕಗಳನ್ನು ಹೊಂದಿವೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೆಟ್ ರನ್ ರೇಟ್ ಹೆಚ್ಚಿರುವ ಕಾರಣ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಉತ್ತಮ ಸ್ಥಾನವನ್ನು ಅಂಕಪಟ್ಟಿಯಲ್ಲಿ ತನ್ನದಾಗಿಸಿಕೊಂಡಿದೆ. ಹಾಗೆ ಈ ಎರಡೂ ತಂಡಗಳಿಗೂ ಲೀಗ್ ಹಂತದ ತಲಾ ಒಂದೊಂದು ಪಂದ್ಯ ಬಾಕಿಯಿದ್ದು, ಪ್ಲೇ ಆಫ್ ಪ್ರವೇಶಿಸಲು ಆ ಪಂದ್ಯಗಳಲ್ಲಿ ಎರಡೂ ತಂಡಗಳು ಸಹ ಜಯ ಸಾಧಿಸಲೇಬೇಕಾದ ಅನಿವಾರ್ಯತೆ ಇದೆ.
ಒಂದು ವೇಳೆ ಅಕ್ಟೋಬರ್ 7ರ ಗುರುವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಜಯಗಳಿಸಿದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಒತ್ತಡ ಹೆಚ್ಚಾಗಲಿದೆ. ಹೀಗಾದರೆ ಮುಂಬೈ ಇಂಡಿಯನ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಡಲಿದ್ದು ಆ ಪಂದ್ಯದಲ್ಲಿ ಈ ಕೆಳಕಂಡ ಅಂತರಗಳಲ್ಲಿ ಜಯ ಗಳಿಸಿದರೆ ಮಾತ್ರ ಪ್ಲೇ ಆಫ್ ಹಂತವನ್ನು ಯಶಸ್ವಿಯಾಗಿ ಪ್ರವೇಶಿಸುವ ಸಾಧ್ಯತೆಯಿದೆ.
ಮುಂಬೈ ಮೊದಲು ಬ್ಯಾಟ್ ಮಾಡಿದರೆ ಈ ಅಂತರದಲ್ಲಿ ಜಯಿಸಬೇಕು:
ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ, ಆ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಡ್ಡಾಯವಾಗಿ 48 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ಅಂಕಪಟ್ಟಿಯಲ್ಲಿ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳುವುದರ ಮೂಲಕ ನಾಲ್ಕನೇ ಸ್ಥಾನಕ್ಕೇರಲಿದ್ದು ಪ್ಲೇ ಆಫ್ ಹಂತವನ್ನು ಪ್ರವೇಶಿಸುವ ಅವಕಾಶ ಸಿಗಲಿದೆ. ಒಂದುವೇಳೆ 48 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರೂ ಕೂಡ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳುವಲ್ಲಿ ವಿಫಲವಾಗಲಿದೆ.
ಬೌಲಿಂಗ್ ಆಯ್ದುಕೊಂಡರೆ ಈ ಅಂತರದಲ್ಲಿ ಗೆಲ್ಲಬೇಕು:
ಒಂದು ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲು ಬೌಲಿಂಗ್ ಮಾಡಿದರೆ ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡುವ ಗುರಿಯನ್ನು ಕಡ್ಡಾಯವಾಗಿ 9 ಓವರ್‌ಗಳಲ್ಲಿ ಬೆನ್ನತ್ತಿದರೆ ಮಾತ್ರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿ ಪ್ಲೇ ಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳಲಿದೆ.
ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯ ನಡೆಯುವುದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯ ನಡೆಯುವುದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಲ್ಲಿ ಉತ್ತಮ ಅವಕಾಶ ದೊರೆತಂತಾಗುತ್ತದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಜಯ ಗಳಿಸಿದರೂ ಸಹ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲು ಯಾವ ಅಂತರದಲ್ಲಿ ಗೆಲ್ಲಲೇಬೇಕು ಎಂಬ ಅಂಕಿ ಅಂಶಗಳು ಲಭ್ಯವಾಗಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಆ ಅಂಕಿ ಅಂಶಗಳನ್ನು ಅನುಸರಿಸಿ ಆಟವನ್ನಾಡುವ ಉತ್ತಮ ಅವಕಾಶವನ್ನು ಪಡೆದುಕೊಳ್ಳಲಿದೆ.